ಕುಮಟಾ: ಎಐಸಿಸಿ ಸೂಚನೆಯಂತೆ ಕೆಪಿಸಿಸಿ ಮಾರ್ಗದರ್ಶನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ ಅಧ್ಯಕ್ಷತೆಯಲ್ಲಿ ಕುಮಟಾ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಲಾಯಿತು. ರಾಹುಲ್ ಗಾಂಧಿ ಅವರ ಮಹಾತ್ವಾಕಾಂಕ್ಷಿ ಕಾರ್ಯಕ್ರಮವಾದ ಭಾರತ್ ಜೋಡೋ ಕುರಿತು ಚರ್ಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಬಗ್ಗೆ ತೀರ್ಮಾನ ತೆಗೆದುಕೊಂಡರು.
ಭೀಮಣ್ಣ ನಾಯ್ಕ ಮಾತನಾಡಿ, ಭಾರತ್ ಜೋಡೋ ಕಾರ್ಯಕ್ರಮದ ರೂಪುರೇಷೆಗಳ ಕುರಿತು ವಿವರಿಸಿದರು. ಅಲ್ಲದೇ, ಚುನಾವಣೆ ಸನಿಹಕ್ಕೆ ಬರುತ್ತಿರುವುದರಿಂದ ಎಲ್ಲರೂ ಪಕ್ಷ ಸಂಘಟನೆಯಲ್ಲಿ ಮುತುವರ್ಜಿ ವಹಿಸುವಂತೆ ತಿಳಿಸಿದರು.
ಶಾರದಾ ಮೋಹನ್ ಶೆಟ್ಟಿ ಮಾತನಾಡಿ, ಎಐಸಿಸಿ ಹಾಗೂ ಮುಖಂಡ ರಾಹುಲ್ ಗಾಂಧಿ ಅವರ ಮಹಾತ್ವಾಕಾಂಕ್ಷಿ ಯೋಜನೆಯಾದ ಭಾರತ್ ಜೋಡೊ ಕಾರ್ಯಕ್ರಮದ ಯಶಸ್ಸಿಗೆ ಕ್ಷೇತ್ರದ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಶೆಟ್ಟಿ, ನವೀನಚಂದ್ರ, ಮುಖಂಡರಾದ ಹೊನ್ನಪ್ಪ ನಾಯಕ, ರವಿಕುಮಾರ ಶೆಟ್ಟಿ, ರಾಮಾ ಮೊಗೇರ್, ರಹಿಮ್ ಸಾಬ್, ಜಯಶ್ರೀ ಮೊಗೇರ್, ಗಾಯತ್ರಿ ಗೌಡ, ರತ್ನಾಕರ ನಾಯ್ಕ, ಪ್ರದೀಪ ನಾಯಕ, ಪುಷ್ಪ ನಾಯ್ಕ, ಸುರೇಖಾ ವಾರೆಕರ್, ಕಾರ್ಯಕರ್ತರು ಹಾಗೂ ಮತ್ತಿತರು ಹಾಜರಿದ್ದರು.