ಶಿರಸಿ: ನಗರದ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಸೋಸಿಯೇಶನ್ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಆದ್ದರಿಂದ ಈ ವರ್ಷದ ಇಂಜಿನಿಯರ್ ದಿನಾಚರಣೆಯನ್ನು ಸೆ. 15 ರಂದು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಶಾಮಸುಂದರ ಭಟ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1996 ರಲ್ಲಿ 15 ಜನ ಸದಸ್ಯರಿಂದ ಅಸ್ತಿತ್ವಕ್ಕೆ ಬಂದ ಶಿರಸಿ ಇಂಜಿನೀಯರ್ ಮತ್ತು ಆರ್ಕಿಟೆಕ್ಟ್ ಅಸೋಸಿಯೇಶನ್ ಇಂದು 100 ಸದಸ್ಯರನ್ನು ಹೊಂದಿ ಅನೇಕ ಸಾಮಾಜಿಕ ಮತ್ತು ತಾಂತ್ರಿಕ ಸೇವೆಗಳನ್ನು ನೀಡುವುದರ ಮೂಲಕ ನಮ್ಮ ಊರಿನ ಹಾಗೂ ಜಿಲ್ಲೆಯ ಅಭಿವೃದ್ಧಿಗೆ
ತನ್ನದೇ ಆದ ಕೊಡುಗೆಯನ್ನು ನೀಡಿ 25 ವರ್ಷಗಳನ್ನು ಪೂರೈಸುತ್ತಿದೆ. ಸಂಸ್ಥೆಯಿಂದ ಕಟ್ಟಡ ಕಾರ್ಮಿಕರಿಗೆ, ಬಾರ್‌ಬೆಂಡರ್‌ಗಳಿಗೆ ಮತ್ತು ಪೇಂಟಿಂಗ್, ಇಲೆಕ್ಟಿಷಿಯನ್ ಹಾಗೂ ಇನ್ನಿತರ ಕಟ್ಟಡ ಕಾರ್ಮಿಕರಿಗೆ ಹಾಗೂ
ಸಾರ್ವಜನಿಕರಿಗೂ ಕೂಡ ಉಪಯುಕ್ತ ಮಾಹಿತಿ ನೀಡುವ ಕಾರ್ಯಾಗಾರಗಳು, ವಸ್ತು ಪ್ರದರ್ಶನಗಳನ್ನು ಏರ್ಪಡಿಸುತ್ತಾ ಬಂದಿದ್ದೇವೆ.
ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಜೊತೆಗೆ ಇಂಜನಿಯರಿಂಗ್ ತರಬೇತಿ ಪಡೆಯಿತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಉಪಯುಕ್ತವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದ್ದೇವೆ. ಸಾರ್ವಜನಿಕರ ಅನುಕೂಲಕ್ಕಾಗಿ ಕಟ್ಟಡ ಕಾರ್ಮಿಕರ ದರಪಟ್ಟಿಯನ್ನು ಕೂಡ ತಯಾರಿಸಿ ನೀಡಲಾಗಿದೆ. ಶಿರಸಿ ನಗರದಲ್ಲಿ ಎರಡು ಬಾರಿ ಬಿಲ್ಡ್‌ಟೆಕ್ ಎಕ್ಸಿಬಿಷನ್ ಮಾಡಿಸಿರುವುದು ಶಿರಸಿ ಹಾಗೂ ನಮ್ಮ ಜಿಲ್ಲೆಯ ಸಾರ್ವಜನಿಕರಿಗೆ ಬಹಳ ಅನುಕೂಲವಾಗಿದೆ. ಅಲ್ಲದೇ ಬಹುಮುಖ್ಯವಾಗಿ ಶಿರಸಿ ನಗರದ ಮಾಸ್ಟರ್ ಪ್ಲಾನ್ ಕರಡು ಪ್ರತಿ ತಯಾರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.
ನಗರದ ಟಿಎಂಎಸ್ ಸಭಾಂಗಣದಲ್ಲಿ ಸೆ. 15 ರಂದು ಸಂಪೂರ್ಣ ದಿನದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರಮುಖರಾದ ಡಾ. ಆರ್ ಪ್ರಭಾಕರ, ಪ್ರೊ. ಅರವಿಂದ್, ಶಿವಾನಂದ ಕಳವೆ, ಪ್ರಮೋದ ಹೆಗಡೆ ಇತರರು ಪಾಲ್ಗೊಳ್ಳುತ್ತಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಮನು ಹೆಗಡೆ, ಎಲ್ ಆರ್ ಹೆಗಡೆ ಇತರರಿದ್ದರು.