ಕಾರವಾರ: ಅಂತಿಮ ವರ್ಷದ ಪದವಿ, ಡಿಪ್ಲೋಮಾ, ಸ್ನಾತಕೋತ್ತರ, ವೃತ್ತಿಪರ ಕೋರ್ಸ್, ಸಂಜೆ ಕಾಲೇಜು ಹಾಗೂ ಕಾನೂನು ವಿದ್ಯಾರ್ಥಿಗಳ ಪರೀಕ್ಷೆಗಳು ಬಾಕಿ ಇರುವದರಿಂದ ವಿದ್ಯಾರ್ಥಿಗಳಿಗೆ ತರಗತಿ, ಪರೀಕ್ಷೆಗಳಿಗೆ ಹಾಜರಾಗಲು ಅವಧಿ ವಿಸ್ತರಿಸಿಕೊಂಡ ರಶೀದಿ ಹಾಗೂ ಪ್ರಸ್ತುತ ಚಾಲ್ತಿಯಲ್ಲಿರುವ ಪಾಸುಗಳನ್ನು ತೋರಿಸಿ ಅ. 31 ರ ವರೆಗೆ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ, ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ಇನ್ನೂ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲಾ ವಿದ್ಯಾರ್ಥಿಗಳ ಚಾಲ್ತಿ ಬಸ್ ಪಾಸ್ ಮಾನ್ಯತಾ ಅವಧಿಯು ಸೆ. 30 ಕ್ಕೆ ಮುಕ್ತಾಯಗೊಳ್ಳುವುದರಿಂದ ನಂತರ ಆ ಪಾಸುಗಳ ಮಾನ್ಯತಾ ಅವಧಿಯನ್ನು ವಿಸ್ತರಿಸಲಾಗುವದಿಲ್ಲ. ಆದ್ದರಿಂದ ಇಂತಹ ವಿದ್ಯಾರ್ಥಿಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಪ್ರಮುಖ ಬಸ್ ನಿಲ್ದಾಣಗಳ ಪಾಸ್ ಕೌಂಟರ್‌ಗಳಲ್ಲಿ ಬಸ್ ಪಾಸ್ ವಿತರಿಸುವ ಪ್ರಕ್ರಿಯೆ ಈಗಾಗಲೇ ಜಾರಿಯಲ್ಲಿರತ್ತದೆ.
ಅಂತಿಮ ದಿನಾಂಕಗಳಂದು ನಿರ್ದಿಷ್ಟ ಪಾಸ್ ಕೌಂಟರ್‌ಗಳಲ್ಲಿ ಉಂಟಾಗಬಹುದಾದ ಅನಗತ್ಯ ಜನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ, ಆದಷ್ಟು ಬೇಗ ಸೇವಾಸಿಂಧು ಆನ್‌ಲೈನ್ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯುವಂತೆ ಹಾಗೂ ಸದರಿ ಸೌಲಭ್ಯದ ಸದುಪಯೋಗ ಪಡೆದು ಸಂಸ್ಥೆಯೊಂದಿಗೆ ಸಹಕರಿಸುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.