ಶಿರಸಿ: ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಮ್ಯಾನ್ ಗಳಿಗೆ ಸರ್ಕಾರದಿಂದಲೇ ಇ.ಎಫ್.ಎಂ.ಎಸ್ ಮೂಲಕ ವೇತನ ನೀಡಬೇಕೆಂದು ಒತ್ತಾಯಿಸಿ ಶಿರಸಿ ಮತ್ತು ಮುಂಡಗೋಡ ತಾಲೂಕಿನ ಗ್ರಾಮ ಪಂಚಾಯತಿ ನೌಕರರ ಸಂಘದಿಂದ ತಾಲೂಕಾ ಪಂಚಾಯಿತಿ ಕಾರ್ಯನಿರ್ವಹಣಾದಿಕಾರಿಗೆ ಮಂಗಳವಾರ ಮನವಿ ನೀಡಲಾಯಿತು.
ಜಿಲ್ಲೆಯಲ್ಲಿರುವ ಗ್ರಾ.ಪಂ.ಗಳಲ್ಲಿ 300 ಕ್ಕೂ ಅಧಿಕ ವಾಟರ್ ಮ್ಯಾನಗಳಿಗೆ ಈ ಹಿಂದೆ ಸರಕಾರದ ಮೂಲಕವೇ ನೇರವಾಗಿ ವೇತನ ಜಮಾವಾಗುತ್ತಿತ್ತು. ಆದರೆ, ಕಳೆದ ಆರು ತಿಂಗಳಿನಿಂದ ಪಂಚಾಯಿತಿಯಿಂದಲೇ ಚೆಕ್ ಮೂಲಕ ವೇತನ ನೀಡಲಾಗುತ್ತಿದೆ. ಪಂಚಾಯಿತಿಯಲ್ಲಿ ಹಣ ಇಲ್ಲದಿದ್ದರೆ ವಾಟರ್ ಮ್ಯಾನ್ ಗಳಿಗೆ ಸಂಬಳ ನೀಡಲು ಸಮಸ್ಯೆಯಾಗುತ್ತದೆ. ಈಗಾಗಲೆ ಹಲವಾರು ಪಂಚಾಯಿತಿಗಳಲ್ಲಿ ಹಣವಿಲ್ಲದ ಕಾರಣ ವಾಟರ್ ಮ್ಯಾನಗಳಿಗೆ ಸಂಬಳವೇ ನೀಡುತ್ತಿಲ್ಲ.
ನಮ್ಮ ಜಿಲ್ಲೆ ಹೊರತು ಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಕೂ ಇ.ಎಫ್.ಎಂ.ಎಸ್ ಮೂಲಕ ಸಂಬಳ ನೀಡಲಾಗುತ್ತಿದೆ. ನಮ್ಮ ಜಿಲ್ಲೆಯ ತಾ.ಪಂ.ಅಧಿಕಾರಿಗಳಿಗೆ ಕೇಳಿದರೆ ಅವರು ಜಿ.ಪಂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಕೇಳುವಂತೆ ಹೇಳುತ್ತಾರೆ. ಆದ್ದರಿಂದ ಈ ಸಮಸ್ಯೆಯನ್ನು ಸರ್ಕಾರ ಕೂಡಲೇ ಬಗೆಹಸಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸುವ ವೇಳೆ ಸಿ.ಆಯ್.ಟಿ ಯು ತಾಲೂಕಾ ಸಂಚಾಲಕ ಅಜ್ಜಪ್ಪ ಸಿ. ಬಾರ್ಕಿ, ಗ್ರಾ.ಪಂ ನೌಕರರ ಸಂಘದ ತಾಲೂಕಾ ಅಧ್ಯಕ್ಷ ಚಂದ್ರಶೇಖರ ಚನ್ನಯ್ಯ, ಉಪಾಧ್ಯಕ್ಷ ಮೆಹಬೂಬ ಅಲಿ ಮುಲ್ಲಾ,ಕಾರ್ಯದರ್ಶಿ ಮಾದೇಶ ಬಿ ಮಲ್ಲೂರ್ ಹಾಗು ಗ್ರಾಪಂ ಸಿಬ್ಬಂದಿಗಳಿದ್ದರು.