ಜನತಾ ವಿದ್ಯಾಲಯ ಶಾಲೆಯಲ್ಲಿ ‘ಚುಟುಕು ಬ್ರಹ್ಮ’ ದಿನಕರ ದೇಸಾಯಿಯವರ ಸ್ಮರಣೆ

ಹೊನ್ನಾವರ: ತಾಲೂಕಿನ ಅನಿಲಗೋಡದ ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಶನಿವಾರ ಚುಟುಕು ಬ್ರಹ್ಮ ದಿನಕರ ದೇಸಾಯಿಯವರ ಜಯಂತಿ ಆಚರಣೆ ನಡೆಯಿತು. ದಿನಕರ ದೇಸಾಯಿಯವರಿಗೆ ಇಷ್ಠವಾದ ದಾಸವಾಳ ಪುಷ್ಪವನ್ನು ಅವರ ಭಾವಚಿತ್ರಕ್ಕೆ ಅರ್ಪಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಲೆಯ ಪೂರ್ವ ವಿದ್ಯಾರ್ಥಿಗಳು, ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿಗಳು, ಬೇರಂಕಿ ಹಿ. ಪ್ರಾ. ಶಾಲೆಯ ಮುಖ್ಯಾಧ್ಯಾಪಕ ಆರ್. ಎನ್. ಹೆಗಡೆಯವರು ದಿನಕರ ದೇಸಾಯಿ ಸರಳ ಜೀವಿ, ಅವರು ಮನಸ್ಸು ಮಾಡಿದ್ದರೆ ಉನ್ನತ ಹುದ್ದೆಗೆ ಏರಿ ಕೋಟಿಗಟ್ಟಲೆ ಗಳಿಸಬಹುದಿತ್ತು, ಆದರೆ ಅವರು ಸಮಾಜ ಸೇವೆ, ಶೈಕ್ಷಣಿಕ ಸೇವೆ, ಸಾಹಿತ್ಯಿಕ ಸೇವೆ ಆಯ್ಕೆ ಮಾಡಿಕೊಂಡು ಮಹಾನ್ ಸಾಧನೆ ಮಾಡಿದರು. ನುಡಿದಂತೆ ನಡೆದ ಮಹಾನ್ ದಾರ್ಶನಿಕರು ದಿನಕರರು ಎಂದು ಹೇಳಿದರು.

ಶಿಕ್ಷಕರಾದ ಜಿ. ಆರ್. ಶೆಟ್ಟಿ ದಿನಕರರ ಚುಟುಕಿನ ಶೈಲಿ, ಅದರಲ್ಲಿಯ ಪ್ರಾಸ, ಅರ್ಥದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯಾಧ್ಯಾಪಕ ಸುಬ್ರಮಣ್ಯ ಶೇರೆಗಾರರು ಪ್ರಾಸ್ತಾವಿಕವಾಗಿ ಮಾತನಾಡಿ, ದಿನಕರ ದೇಸಾಯಿ ಯವರು ನಮಗೆ ಅನ್ನದಾತರು, ನಿಮಗೆ ಜ್ಞಾನದಾತರು. ಕುಗ್ರಾಮಗಳಲ್ಲಿ ಶಾಲೆಗಳನ್ನು ಸ್ಥಾಪಿಸಿ ಜ್ಞಾನದ ಬೆಳಕನ್ನು ನೀಡಿದವರು. ಅವರ ಆದರ್ಶಗಳನ್ನು ಜೀವನದಲ್ಲಿ ಪಾಲಿಸಬೇಕೆಂದರು.

ವಿದ್ಯಾರ್ಥಿಗಳು ದಿನಕರರಿಂದ ರಚಿತವಾದ ಚುಟುಕು ವಾಚನ, ಭಾವಗೀತೆ ಗಾಯನ, ಸಮೂಹ ಗಾಯನ ಕಾರ್ಯಕ್ರಮ ನಡೆಯಿತು. ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.