ಕ್ರೀಡಾ ಕ್ಷೇತ್ರದಿಂದ ಜಗತ್ತನ್ನು ಹತ್ತಿರದಿಂದ ನೋಡುವಂತಾಗಿದೆ – ನಾಗರಾಜ ನಾಯ್ಕಡ

ಹೊನ್ನಾವರ: ಕ್ರೀಡೆಯು ಮೈ ನವಿರೇಳಿಸುವ ಕ್ಷೇತ್ರವಾಗಿದ್ದು, ಕ್ರೀಡೆಯಿಂದ ಜಗತ್ತನ್ನು ಹತ್ತಿರದಿಂದ ನೋಡುವಂತಾಗಿದೆ ಎಂದು ತಹಶೀಲ್ದಾರ ನಾಗರಾಜ ನಾಯ್ಕಡ ಹೇಳಿದರು.

ಮಂಕಿ ಬಣಸಾಲೆಯ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಆಯೋಜಿಸಿದ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಇಲಾಖಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿ ವಿಜೇತರಾದವರು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗುವ ಮೂಲಕ ಜಿಲ್ಲೆಯನ್ನು ಜಗತ್ತು ಗುರುತಿಸುವಂತಾಗಲಿ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ಕ್ರೀಯಾಶೀಲ ಶಿಕ್ಷಕರನ್ನು ಹೊಂದಿದ ಹೊನ್ನಾವರ ತಾಲೂಕಿನಲ್ಲಿ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮುತ್ತಿದ್ದಾರೆ. ಎಲ್ಲಾ ಶಿಕ್ಷಕರ ಶ್ರಮದಿಂದ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ಸಂಘಟನೆಗೊಂಡಿದೆ ಎಂದರು.

ರಾಜ್ಯಮಟ್ಟದಲ್ಲಿ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಶಿಕ್ಷಕ ಕ್ರೀಡಾ ಪ್ರತಿಭೆಗಳಾದ ಯಮುನಾ ನಾಯ್ಕ, ಸವಿತಾ ಹೆಗಡೆ, ವಿ. ಜಿ. ಹೆಗಡೆ, ಭಾಸ್ಕರ ನಾಯ್ಕ, ಮಾರುತಿ ನಾಯ್ಕ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಜಿ.ಎಚ್.ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೃಷ್ಣಾನಂದ ಕೆ., ಜಿಲ್ಲಾ ಗೌರವಾಧ್ಯಕ್ಷ ಸುಧೀಶ ನಾಯ್ಕ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀಧರ ನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುದರ್ಶನ ಭಟ್ಟ ಹಾಗೂ ಮುಂತಾದವರು ಉಪಸ್ಥಿತರಿದ್ದರು.