ಸರ್ವಋತು ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಆಗ್ರಹ.!

ಸಿದ್ದಾಪುರ: ಸರ್ವಋತು ರಸ್ತೆ ನಿರ್ಮಿಸಿಕೊಡುವಂತೆ ಸ್ಥಳೀಯ ಜನಪ್ರತಿನಿಧಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಯಾವುದೇ ಕ್ರಮತೆಗೆದುಕೊಳ್ಳದ್ದಕ್ಕೆ ತಾಲೂಕಿನ ನರಮುಂಡಿಗೆ ಗ್ರಾಮಸ್ಥರು ಸಂಚಾರಕ್ಕೆ ಅಯೋಗ್ಯವಾಗಿದ್ದ ರಸ್ತೆಯನ್ನು ತಾವೇ ದುರಸ್ಥಿ ಮಾಡಿಕೊಂಡು ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಕೊಡಗಿಬೈಲ್ ಕ್ರಾಸ್ ನಿಂದ ನರಮುಂಡಿಗೆ ಸಂಪರ್ಕಿಸುವ ರಸ್ತೆ ಹದಗೆಟ್ಟು ಓಡಾಡಕ್ಕೆ ತೊಂದರೆ ಉಂಟಾಗಿತ್ತು. ಕಳೆದ ಸಾಲಿನಲ್ಲಿ ಒಂದೂವರೆ ಕಿಲೋಮೀಟರ್ ರಸ್ತೆಗೆ ಜಲ್ಲಿ ಕಡಿ ಹಾಕಿದ್ದರು. ಆದರೆ ಈ ಬಾರಿಯ ಅಬ್ಬರದ ಮಳೆಗೆ ರಸ್ತೆಯ ಮೇಲೆ ನೀರು ಹರಿದು ಸಂಚಾರ ದುಸ್ಥರವಾಗಿತ್ತು. ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಸರ್ಕಸ್ ಮಾಡುತ್ತಾ ಚಲಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆ ಸರಿಪಡಿಸುವಂತೆ ಬೇಡಿಕೆ ಸಲ್ಲಿಸಿ ಸುಸ್ತಾದ ನರಮುಂಡಿಗೆಯ ಯುವಕರು ತಾವೇ ರಸ್ತೆ ರಿಪೇರಿಗೆ ಮುಂದಾಗಿದ್ದಾರೆ. ಹೊಂಡ ಮುಚ್ಚಿ, ರಸ್ತೆಯ ಮೇಲೆ ಹರಿಯುವ ನೀರು ರಸ್ತೆಯ ಇಕ್ಕೆಲಕ್ಕೆ ಬೀಳುವಂತೆ ಅಡ್ಡದಂಡೆ ಮಾಡಿದ್ದಾರೆ. ಮಣ್ಣು ಕೊಚ್ಚಿ ಹೊಂಡ ಬಿದ್ದ ಕಡೆ ಮಣ್ಣು ಹಾಕಿ ಸರಿ ಪಡಿಸಿದ್ದಾರೆ.

ಸರ್ವಋತು ರಸ್ತೆ ಅವಶ್ಯಕತೆಯಿದ್ದು ಹಲವಾರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಗೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ರಸ್ತೆ ಆಗದಿರುವುದು ಇಲ್ಲಿಯ ಸ್ಥಳೀಯರಲ್ಲಿ ಅಸಮಾಧಾನ ಉಂಟು ಮಾಡಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಅಗತ್ಯ ಮೂಲಭೂತ ಸೌಕರ್ಯವಾದ ರಸ್ತೆ ಇಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಕೂಡಲೇ ಸಂಬಂಧಪಟ್ಟ ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ರಸ್ತೆಯನ್ನು ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರಾದ ಈಶ್ವರ ಮಂಜುನಾಥ ನಾಯ್ಕ, ಜಯರಾಮ್ ನಾಯ್ಕ, ರಜನಿಕಾಂತ್ ನಾಯ್ಕ, ವಿಜಯಕುಮಾರ್ ನಾಯ್ಕ, ಲೋಕೇಶ್ ನಾಯ್ಕ, ಗಜು ನಾಯ್ಕ, ಪ್ರಜ್ವಲ್ ನಾಯ್ಕ ಆಗ್ರಹಿಸಿದ್ದಾರೆ.