ವಿಶ್ವದರ್ಶನ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನ ಆಚರಣೆ

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನ ಆಚರಿಸಲಾಯಿತು. ನಿವೃತ್ತ ಪ್ರಾಂಶುಪಾಲರಾದ ಕೆ. ಎಸ್. ಹೊಸಮನಿ ಸಾಕ್ಷರತಾ ದಿನದ ಮಹತ್ವ ಹಾಗೂ ಸಾಕ್ಷರತೆ ಪ್ರಮಾಣ ಕುರಿತಂತೆ ಉಪನ್ಯಾಸ ನೀಡಿದರು.

ಶಿಕ್ಷಣ ಬೆಳೆದು ಬಂದ ದಾರಿ, ಶಿಕ್ಷಕರ ಜವಾಬ್ದಾರಿಗಳು, ಶೈಕ್ಷಣಿಕ ಗುರಿಗಳ ಬಗ್ಗೆ ಮಾತನಾಡಿ, ದೇಶದ ಪ್ರಗತಿಯಲ್ಲಿ ಸಾಕ್ಷರತೆಯ ಮಹತ್ವ ಕುರಿತು ವಿವರಿಸಿದರು. ಸಾಕ್ಷರರಾದ ಮಾನವ ಸಂಪನ್ಮೂಲ ದೇಶದ ಸರ್ವಾಂಗೀಣ ಪ್ರಗತಿಯಲ್ಲಿ ಮಹತ್ವದ ಪಾತ್ರ ಬೀರುತ್ತದೆ. ಹಾಗಾಗಿ ಸುಶಿಕ್ಷಿತ ವ್ಯಕ್ತಿಗಳಾದ ನಾವು ಯಾವೆಲ್ಲ ಜವಾಬ್ದಾರಿಗಳನ್ನು ಪೂರೈಸಬೇಕು ಎಂದರು.

ಅಧ್ಯಕ್ಷತೆವಹಿಸಿದ್ದ ನರಸಿಂಹ ಕೋಣೆಮನೆ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹಿರಿಯರ, ಸಂಪನ್ಮೂಲ ವ್ಯಕ್ತಿಗಳ, ಸಮಾಜದಲ್ಲಿ ಗುರುತಿಸಿಕೊಂಡ, ಸಾಧನೆಗೈದ ವ್ಯಕ್ತಿಗಳ ಪರಿಚಯವನ್ನು ಮಾಡುತ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉತ್ತಮ ಅಂಶಗಳನ್ನು ಬೆಳೆಸಿಕೊಳ್ಳಬೇಕು ಎಂದರು. ಈ ವೇಳೆ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್ ಎಲ್ ಭಟ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.