ದಾಂಡೇಲಿ: ನಗರದ ಸೋಮಾನಿ ವೃತ್ತದ ಬಳಿ ನಿರ್ಮಾಣಗೊಂಡಿರುವ ಕಾರ್ಮಿಕ ಭವನವನ್ನು ಶೀಘ್ರವೇ ಉದ್ಘಾಟಿಸುವಂತೆ ಪೌರಕಾರ್ಮಿಕ ಸಂಘಟನೆ ಅಧ್ಯಕ್ಷ ಡಿ. ಸ್ಯಾಮ್ಸನ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು
ಆಗ್ರಹಿಸಿದ್ದಾರೆ.
ಕಾರ್ಮಿಕ ಮತ್ತು ಕಾರ್ಖಾನೆ ನಗರವಾದ ದಾಂಡೇಲಿ ನಗರಕ್ಕೆ ಈ ಹಿಂದಿನ ಸರ್ಕಾರದ ಪರಿಶ್ರಮದಿಂದ ಸ್ಥಳೀಯ ಕಾರ್ಮಿಕರ ಅನುಕೂಲಕ್ಕಾಗಿ ಕೋಟ್ಯಾಂತರ ರೂಪಾಯಿ ಅನುದಾನದೊಂದಿಗೆ ಕಾರ್ಮಿಕ ಭವನ ಮಂಜೂರಿಯಾಗಿ ಕಾರ್ಮಿಕರ ಭವನ ಕಾಮಗಾರಿಯು ಪೂರ್ಣಗೊಂಡ ಹಲವು ತಿಂಗಳುಗಳೇ ಕಳೆದಿವೆ.
ಅಲ್ಲದೇ ಕಾರ್ಮಿಕ ಸಚಿವರು ಇದೇ ಜಿಲ್ಲೆಯವರಾಗಿದ್ದರೂ ಕಾರ್ಮಿಕ ಭವನ ಉದ್ಘಾಟನೆ ಭಾಗ್ಯ ಕಾಣದಿರುವದಕ್ಕೆ ಕಾರ್ಮಿಕ ವಲಯದಲ್ಲಿ ಅಸಮಾಧಾನ ಎದ್ದು ಕಾಣುತ್ತದೆ. ಕೂಡಲೇ ಜಿಲ್ಲಾ ಆಡಳಿತವು ವಿಶೇಷ ಆಸಕ್ತಿವಹಿಸಿ ಕಾರ್ಮಿಕ ಭವನ ಉದ್ಘಾಟನೆಗೆ ಮುಂದಾಗಬೇಕು. ಕಾರ್ಮಿಕ ಭವನದ ಉದ್ಘಾಟನೆಯಿಂದ ಇಲಾಖೆ ಕಾರ್ಯಕ್ರಮ ಮತ್ತು ಕಾರ್ಮಿಕರ ಮದುವೆ ಸಮಾರಂಭ,ಇನ್ನಿತರ ಕಾರ್ಯಗಳಿಗೆ ಈ ಭವನ ಅನುಕೂಲವಾಗಲಿದೆ. ಹಾಗಾಗಿ, ಶೀಘ್ರದಲ್ಲಿ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ನಿಗದಿಪಡಿಸಬೇಕೆಂಬ ಆಗ್ರಹವನ್ನು ಪತ್ರದಲ್ಲಿ ತಿಳಿಸಿದ್ದಾರೆ.