ವೆಂಕಣ್ಣ ನಾಯಕ, ಪ್ರಭಾಕರ ರಾಣೆ ನಿಧನಕ್ಕೆ ಸತೀಶ್ ಸೈಲ್ ಕಂಬನಿ

ಕಾರವಾರ: ಸ್ವಾತಂತ್ರ‍್ಯ ಹೋರಾಟಗಾರ ಅಂಕೋಲಾದ ವೆಂಕಣ್ಣ ನಾಯಕ ಮತ್ತು ಕಾರವಾರ ಜೋಯಿಡಾ ತಾಲೂಕುಗಳಲ್ಲಿ ಹಲವು ವಿದ್ಯಾಸಂಸ್ಥೆಗಳನ್ನು ತೆರೆದು ವಿದ್ಯಾದಾನ ಮಾಡಿದ ಮಾಜಿ ಸಚಿವ ಪ್ರಭಾಕರ ರಾಣೆ ನಿಧನಕ್ಕೆ ಮಾಜಿ ಶಾಸಕ ಸತೀಶ ಸೈಲ್ ಸಂತಾಪ ಸೂಚಿಸಿದ್ದಾರೆ.

ವೆಂಕಣ್ಣ ಬೊಮ್ಮಯ್ಯ ನಾಯಕರು ಬ್ರಿಟಿಷ್ ಸರಕಾರದ ವಿರುದ್ದ ಅಸಹಕಾರ ಚಳವಳಿ, ಜಂಗಲ್ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಮುಂತಾದ ಹೋರಾಟಗಳಲ್ಲಿ ಬ್ರಿಟಿಷರ ವಿರುದ್ದ ಹೋರಾಟ ಮಾಡಿ ಜೈಲು ವಾಸ ಅನುಭವಿಸಿ ದೇಶಕ್ಕೆ ಸ್ವಾತಂತ್ರ‍್ಯ ಒದಗಿಸಿಕೊಟ್ಟವರಾಗಿದ್ದರು.

ಇನ್ನು ಮಾಜಿ ಸಚಿವ ಪ್ರಭಾಕರ ಎಸ್. ರಾಣೆ ಅವರು ಕಾರವಾರ ಮತ್ತು ಜೋಯಿಡಾ ತಾಲೂಕುಗಳಲ್ಲಿ ವಿಧ್ಯಾಭ್ಯಾಸಕ್ಕೆ ಅನುಕೂಲವೇ ಇಲ್ಲದ ಕುಗ್ರಾಮಗಳಲ್ಲಿ ಅತ್ಯಂತ ಕಷ್ಟಪಟ್ಟು ವಿದ್ಯಾ ಸಂಸ್ಥೆಗಳನ್ನು ತೆರೆದು ಬಡವರಿಗೆ ವಿದ್ಯಾದಾನ ಮಾಡಿದ ಮಹಾನುಭಾವರು. ಕರ್ನಾಟಕ ಸರಕಾರದ ಸಚಿವರಾಗಿ ವಯಸ್ಕರ ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ ರಾಣೆಯವರು ಓರ್ವ ಶಿಕ್ಷಣ ಪ್ರೇಮಿಯಾಗಿದ್ದು ನೂರಾರು ಸ್ಥಳೀಯ ಯುವಕರಿಗೆ ತನ್ನ ಸಂಸ್ಥೆಯಲ್ಲಿ ಕೆಲಸ ನೀಡಿದ ಅನ್ನದಾತರಾಗಿದ್ದರು.

ಇದೀಗ ಕಾರವಾರ ಮತ್ತು ಅಂಕೋಲಾ ತಾಲೂಕಿನ ಈ ಎರಡು ರತ್ನಗಳನ್ನು ಕಳಕೊಂಡ ನಾವು ಬಡವಾಗಿದ್ದೇವೆ. ಅಗಲಿದ ಈರ್ವರ ದಿವ್ಯಾತ್ಮಗಳಿಗೊ ಭಗವಂತನು ಚಿರ ಶಾಂತಿ ನೀಡಲಿ ಹಾಗೂ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಭಗವಂತ ದಯಪಾಲಿಸಲಿ ಎಂದು ಮಾಜಿ ಶಾಸಕ ಸತೀಶ ಸೈಲ್ ದುಃಖ ವ್ಯಕ್ತಪಡಿಸಿದ್ದಾರೆ