ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವರೇ ಶಿಕ್ಷಕರು – ಶಾಸಕ ಆರ್ ವಿ ದೇಶಪಾಂಡೆ

ದಾಂಡೇಲಿ: ತಂದೆ ತಾಯಿ ಮೊದಲ ಗುರು. ಆದರೆ, ಎರಡನೇ ಗುರು ಶಿಕ್ಷಕರು. ಶಿಕ್ಷಕ ವೃತ್ತಿಯು ಸರ್ವಶ್ರೇಷ್ಠ
ವೃತ್ತಿಯಾಗಿದ್ದು, ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವ ದಿವ್ಯ ಜ್ಯೋತಿ ಎಂದು ಶಾಸಕ ಆರ್ ವಿ ದೇಶಪಾಂಡೆ ಹೇಳಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ, ಶಿರಸಿ ಶೈಕ್ಷಣಿಕ ಜಿಲ್ಲೆ ಹಾಗೂ ತಾಲೂಕಾ ಶಿಕ್ಷಕರ ದಿನೋತ್ಸವ ಆಚರಣಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೀತಿಯಲ್ಲಿ ಸೌಲಭ್ಯಗಳನ್ನು ನೀಡಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಗುರುಗಳ ಆಶೀರ್ವಾದ ಮುಖ್ಯ. ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಶಿಕ್ಷಕ ಎಲ್ಲರಿಗೂ ದೊರಯಬೇಕು. ಮಕ್ಕಳನ್ನು ಉತ್ತಮ ಪ್ರಜೆಯಾಗಿ, ಒಳ್ಳೆಯ ಚಾರಿತ್ರಿಕ ರೂಪಿಸುವ ಜವಾಬ್ದಾರಿ ಪ್ರತಿ ಶಿಕ್ಷಕ ಮೇಲೆ ಇದೆ ಎಂದು ಹೇಳಿ ಎಲ್ಲ ಶಿಕ್ಷಕರಿಗೆ ಶುಭಾಶಯಗಳನ್ನು ಕೋರಿದರು.

ಹಳಿಯಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಕೆ. ಮಹಾಲೆ,ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ ಮಾತನಾಡಿ ಕಾರ್ಯಕ್ರಮದಲ್ಲಿ ತಾಲೂಕಿನ ಉತ್ತಮ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು, ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿಜೇತರಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು. ಕಾರವಾರದ ಬಾಡದ ಶಿವಾಜಿ ಕಾಲೇಜಿನ ಉಪನ್ಯಾಸಕ ಶಿವಾನಂದ ನಾಯ್ಕ ಇವರು ವಿಶೇಷ ಉಪನ್ಯಾಸ ನೀಡಿದರು.

ಈ ವೇಳೆ ದಾಂಡೇಲಿ ನಗರಸಭೆ ಅಧ್ಯಕ್ಷೆ ಸರಸ್ವತಿ ರಜಪೂತ, ಹಳಿಯಾಳ ಪ್ರಬಾರಿ ಸಮನ್ವಯಾಧಿಕಾರಿ ವಿಷ್ಣು ಜಿ. ನಾಯ್ಕ, ಕ ವಿವೇಕ ಕವರಿ, ಎಸ್.ಎಸ್. ನೂಲನ, ಜಾಕೀರ್ ಹುಸೇನ್ ಜಂಗೂಭಾಯಿ, ಸತೀಶ ಜಿ. ನಾಯಕ ಭಾವಿಕೇರಿ ಹಾಗೂ ತಾಲೂಕಿನ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.