ಶಿಕ್ಷಕರ ದಿನಾಚರಣೆಯ ಪ್ರಯುಕ್ತ ‘ಉತ್ತಮ ಶಿಕ್ಷಕ’ ಪ್ರಶಸ್ತಿ ಪ್ರದಾನ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ: ಶಿಕ್ಷಕರು ಸಿಲೆಬಸ್ ಆಚೆಯ ಜ್ಞಾನವನ್ನೂ ಹೊಂದಬೇಕು. ವಿದ್ಯಾರ್ಥಿಗಳಿಗೆ ಸಿಲೆಬಸ್ ಶಿಕ್ಷಣವನ್ನು ಮಾತ್ರ ನೀಡಿದರೆ ನೌಕರಿಗಾಗಿ ಮಾತ್ರ ಸಿದ್ಧಪಡಿಸಿದಂತಾಗುತ್ತದೆ ಎಂಬುದನ್ನು ನೆನಪಿಡಬೇಕು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಿಲೆಬಸ್ ಮಾತ್ರ ಕಲಿಸಿದರೆ ಪ್ರಭಾವಿ ಶಿಕ್ಷಕರಾಗಲು ಸಾಧ್ಯವಿಲ್ಲ. ರಾಧಾಕೃಷ್ಣನ್ ಅವರ ವ್ಯಕ್ತಿತ್ವ ಸಿಲೆಬಸ್ ಗೆ ಮಾತ್ರ ಸೀಮಿತವಾಗಿರಲಿಲ್ಲ. ಪಠ್ಯ ಮಾತ್ರ ಕಲಿಸಿದರೆ, ಬ್ರಿಟೀಷರ ಶಿಕ್ಷಣ ಪದ್ಧತಿ ನೀಡಿದಂತಾಗುತ್ತದೆ. ನಮ್ಮ ಸಂಸ್ಕೃತಿಯ ಗ್ರಂಥಗಳನ್ನು ಓದಿ, ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ಸಮಾಜದಲ್ಲಿ ಸ್ವಯಂ ಶಿಸ್ತು ಇಂದು ಕಡಿಮೆ ಆಗುತ್ತಿದೆ. ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬರೂ ಸ್ವಯಂ ಜಾಗೃತಿ ಮೂಡುವಂತೆ ಮಾಡಬೇಕಾಗಿರುವುದು ಶಿಕ್ಷಕನ ಜವಾಬ್ದಾರಿ. ವ್ಯಕ್ತಿಗಳಲ್ಲಿ ರಾಷ್ಟ್ರ ಮೊದಲು ಎಂಬುದನ್ನು ಮೂಡಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.

ಇನ್ನೂ ಈ ಕಾರ್ಯಕ್ರಮ ಕೇವಲ ಶಿಕ್ಷಣ ಇಲಾಖೆಗೆ ಸಂಬಂಧಿಸಿದ್ದಲ್ಲ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವದ ವ್ಯಕ್ತಿಗಳ ನಿರ್ಮಾಣ ಮಾಡುವ ಕಾರ್ಯಕ್ರಮ. ಶಿಕ್ಷಕರು ನಿವೃತ್ತಿಯ ಬಳಿಕ ರಾಜಕೀಯ ಪಕ್ಷಗಳತ್ತ ವಾಲದೇ ತಮ್ಮ ಶಿಕ್ಷಣದ ಅನುಭವವನ್ನು ಇಲಾಖೆಗೆ ನೀಡುವಂತಾಗಬೇಕು ಎಂದರು.

ಶಿರಸಿ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವದಕೆರಿಯ ಸಹ ಶಿಕ್ಷಕಿ ಗಿರಿಜ ಎಲ್ ಭಟ್ ,
ಸಿದ್ದಾಪುರ ತಾಲೂಕಿನ ಹೇಬಳೆಗದ್ದೆ ಶಾಲೆಯ ಸಹ ಶಿಕ್ಷಕಿ ಮುಕಾಂಬೆ ಶೆಟ್ಟಿ, ಯಲ್ಲಾಪುರ ತಾಲೂಕಿನ ವಜ್ರಳ್ಳಿ ಶಾಲೆಯ ಸಹ ಶಿಕ್ಷಕಿ ರಾಧಾ ಮಹಾಬಲೇಶ್ವರ ಭಟ್, ಮುಂಡಗೋಡ ತಾಲೂಕಿನ ಆಲಳ್ಳಿ ಶಾಲೆಯ ಸಹ ಶಿಕ್ಷಕಿ ರೂಪಾ ಶೆಟ್ಟಿ, ಹಳಿಯಾಳ ತಾಲೂಕಿನ ವಿಟ್ನಾಳ -ಭರ್ಚಿ ಶಾಲೆಯ ಸಹ ಶಿಕ್ಷಕ ಸುಭಾಸ ಚಂದ್ರು ನಾಯಕ ಹಾಗೂ ಜೋಯಿಡಾ ತಾಲೂಕಿನ ಇಳವೆ ಶಾಲೆಯ ಸಹ ಶಿಕ್ಷಕಿ ರೇಖಾ ಮುಕ್ರಿ ಆಯ್ಕೆ ಯಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪಟ್ಟಣದ ನೆಹರೂ ನಗರದ ಉರ್ದು ಪ್ರಾಥಮಿಕ ಶಾಲೆಯ ಪದನ್ನೋತ ಮುಖ್ಯಾಧ್ಯಾಪಕ ಅಬ್ದುಲ್ ಫಝಲ್ ಶೇಖ ಅಹಮದಸಾಬ್ , ಸಿದ್ದಾಪುರ ತಾಲೂಕಿನ ಹಾಲ್ಕಣಿ ಶಾಲೆಯ ಶಿಕ್ಷಕ ನಾರಾಯಣ ನಾಯಕ, ಯಲ್ಲಾಪುರ ತಾಲೂಕಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಾಪುರದ ಪದೋನ್ನತ ಮುಖ್ಯಾಧ್ಯಾಪಕ ಜಗದೀಶ ಚಂದ್ರ ನಾಯ್ಕರ, ಮುಂಡಗೋಡ ತಾಲೂಕಿನ ಇಂದೂರಕೊಪ್ಪ ಶಾಲೆಯ ಸಹ ಶಿಕ್ಷಕಿ ಗೀತಾ ಜಿ ಪಟಗಾರ, ಹಳಿಯಾಳ ತಾಲೂಕಿನ ಮದನಳ್ಳಿ ಶಾಲೆಯ ಪದೋನ್ನತ ಮುಖ್ಯಾಧ್ಯಾಪಕಿ ಮಲ್ಲವ್ವ ಶಿವಪ್ಪ ಹಳ್ಳೂರ, ಜೋಯಿಡಾ ತಾಲೂಕಿನ ಕುಂಡಲ ಶಾಲೆಯ ಸಹ ಶಿಕ್ಷಕ ಪ್ರವೀಣ ಜಿ ಪಾವಸ್ಕರ್ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರೌಢಶಾಲಾ ವಿಭಾಗದಲ್ಲಿ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಗಜಾನನ ಪ್ರೌಢಶಾಲೆ ಸಹ ಶಿಕ್ಷಕಿ ವೀಣಾ ಗಜಾನನ ಭಟ್ , ಸಿದ್ದಾಪುರ ತಾಲೂಕಿನ ಕಾನಸೂರು ಕಾಳಿಕಾಭವಾನಿ ಪ್ರೌಢಶಾಲೆ ಸಹ ಶಿಕ್ಷಕಿ ಯಶಸ್ವಿನಿ ಶ್ರೀಧರ ಮೂರ್ತಿ, ಯಲ್ಲಾಪುರ ತಾಲೂಕಿನ ಹೋಲಿ ರೋಜರಿ ಪ್ರೌಢಶಾಲೆ ಯಲ್ಲಾಪುರ ದ ದೈಹಿಕ ಶಿಕ್ಷಣ ಶಿಕ್ಷಕ ಅಂತೋನ ಎಸ್ ರೋಡ್ರಿಗಸ್ , ಮುಂಡಗೋಡ ತಾಲೂಕಿನ ಮೈನಳ್ಳಿ ಸರಕಾರಿ ಪ್ರೌಢಶಾಲೆ ಯ ಸಹ ಶಿಕ್ಷಕ ಗೋಪಾಲ ವಾಸುದೇವ ಕನಸೆ, ಹಳಿಯಾಳ ತಾಲೂಕಿನ ಜನತಾ ವಿದ್ಯಾಲಯ ಪ್ರೌಢಶಾಲೆ ದಾಂಡೇಲಿ ಯ ಚಿತ್ರಕಲಾ ಶಿಕ್ಷಕ ಅಬ್ದುಲ್ ರಜಾಕ್ ಬಾಗವಾನ ಹಾಗೂ ಜೋಯಿಡಾ ತಾಲೂಕಿನ ಜಗಲಬೇಟ ಸರ್ಕಾರಿ ಪ್ರೌಢಶಾಲೆ ಯ ಮುಖ್ಯ ಶಿಕ್ಷಕಿ ಸುಜಾತಾ ಎಚ್ ನಾಯಕ ಅವರಿಗೆ ಪ್ರದಾನ ಮಾಡಲಾಯಿತು. ಇದೇ ವೇಳೆ ನಿವೃತ್ತ 30 ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಸಹಾಯಕ ಆಯುಕ್ತ ದೇವರಾಜ್, ಡಿಡಿಪಿಐ ಪಿ. ಬಸವರಾಜ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಸ್. ಹೆಗಡೆ ಹಾಗೂ ಇತರರಿದ್ದರು.