ಶಿರಸಿ: ಶಿಕ್ಷಣದ ಜೊತೆಗೆ ರಂಗಭೂಮಿ, ಸಾಹಿತ್ಯ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ತೊಡಗಿಕೊಂಡ ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗ್ವತ್ ಅವರಿಗೆ ‘ಅತ್ಯುತ್ತಮ ಶಿಕ್ಷಕ’ ರಾಜ್ಯ ಪ್ರಶಸ್ತಿ ಪ್ರಕಟವಾಗಿದೆ.
ಕುಮಟಾ ತಾಲೂಕಿನ ಹಂದಿಗೋಣ ಗ್ರಾಮದ ನಾರಾಯಣ ಭಾಗ್ವತ್ ಅವರು ಕಳೆದ 31 ವರ್ಷದಿಂದ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾ, ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿಸುತ್ತಿದ್ದಾರೆ. 25 ವರ್ಷಗಳಿಗೂ ಅಧಿಕ ಕಾಲ ಗ್ರಾಮೀಣ ಭಾಗದಲ್ಲಿ ಬೋಧನೆ ಮಾಡಿದ್ದಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯರಾಗಿ ತೊಡಗಿಕೊಂಡು ಕಾವ್ಯ, ನಾಟಕ, ಚಿತ್ರ ರಚನೆ, ನಿರ್ದೇಶನ, ಗಾಯನ, ಬೇಸಿಗೆ ಶಿಬಿರ, ಮೇಕಪ್, ವೇಷಭೂಷಣ ಸೇರಿದಂತೆ ಅನೇಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ತಾಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಣ ಪ್ರಶಸ್ತಿ ಜೊತೆಗೆ ರಾಜ್ಯ ಜ್ಞಾನ ಸಿಂಧು, ನೇಶನ್ ಬಿಲ್ಡರ್, ಮಕ್ಕಳ ರಂಗಭೂಮಿ ಸೇವೆಗಾಗಿ ಕಸಾಪ ಪ್ರಶಸ್ತಿ, ಲಾಕ್ ಡೌನ್ ಕಾಲದಲ್ಲಿ ಮಕ್ಕಳಿಗೆ ಇ-ಲರ್ನಿಂಗ್, ಮಕ್ಕಳ ಕಲಿಕೆಗೆ ಬ್ಲಾಗ್ ರಚನೆಯಲ್ಲಿ ಕೂಡ ತೊಡಗಿಕೊಂಡು ಗಮನ ಸೆಳೆದಿದ್ದಾರೆ.
50 ಕ್ಕೂ ಅಧಿಕ ಮಕ್ಕಳ ನಾಟಕ ನಿರ್ದೇಶನ, 15 ಕ್ಕೂ ಅಧಿಕ ಶಿಕ್ಷಕರಿಗೆ ನಾಟಕ ನಿರ್ದೇಶನ ಮಾಡಿದ್ದಾರೆ. ಅನೇಕ ಕಡೆ ಸಂಪನ್ಮೂಲ ವ್ಯಕ್ತಿ ಆಗಿಯೂ ಕಾರ್ಯ ಮಾಡುತ್ತಿದ್ದಾರೆ. ಇವರ ಭಾಷಾ ಕಲಿಸುವಿಕೆಗೆ ಮಕ್ಕಳು ಆಸಕ್ತಿಯಿಂದ ತೊಡಗಿಕೊಳ್ಳುವುದು ಇವರು ಕಲಿಸುವ ವಿಧಾನಕ್ಕೆ ಸಾಕ್ಷಿಯಾಗಿದೆ.
ಈ ಪ್ರಶಸ್ತಿ ನಿರೀಕ್ಷೆ ಇರಲಿಲ್ಲ. ಇದರ ಸಂಪೂರ್ಣ ಗೌರವ ಮಕ್ಕಳಿಗೆ ಸಲ್ಲುತ್ತದೆ ಹಾಗೂ ನಾನು ಇದುವರೆಗೆ ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಸಮರ್ಪಿಸುತ್ತೇನೆ.
– ನಾರಾಯಣ ಭಾಗ್ವತ್, ಶಿಕ್ಷಕ