ಕಾರವಾರ: ಜಿಲ್ಲೆಯೆಲ್ಲೆಡೆ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ನಡುವೆ 5 ದಿನ ಹಾಗೂ 7 ದಿನಗಳಲ್ಲಿ ಗಣೇಶಮೂರ್ತಿ ವಿಸರ್ಜನೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ದಾಂಡೇಲಿ ತಾಲೂಕಿನಲ್ಲಿ ಸೆ. 4 ರ ಬೆಳಿಗ್ಗೆ 6 ಗಂಟೆಯಿಂದ ಸೆ. 9 ರ ಬೆಳಿಗ್ಗೆ 6 ಗಂಟೆಯವರೆಗೆ, ಕಾರವಾರ ನಗರ ಹಾಗೂ ಮಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳಲ್ಲಿ ಸೆ. 4 ರ ಬೆಳಿಗ್ಗೆ 6 ಗಂಟೆಯಿAದ ರಾತ್ರಿ 11.59 ರವರೆಗೆ, ಯಲ್ಲಾಪುರ ತಾಲೂಕಿನಲ್ಲಿ ಸೆ. 4 ರ ಬೆಳಿಗ್ಗೆ 6 ಗಂಟೆಯಿಂದ ಸೆ. 5 ರ ಬೆಳಿಗ್ಗೆ 6 ಗಂಟೆಯವರೆಗೆ, ಮುಂಡಗೋಡ ತಾಲೂಕಿನಲ್ಲಿ ಸೆ. 4 ರ ಬೆಳಿಗ್ಗೆ 6 ಗಂಟೆಯಿಂದ ಸೆ. 8 ರ ವರೆಗೆ 5 ದಿನಗಳ ಕಾಲ, ಭಟ್ಕಳ, ಹೊನ್ನಾವರ ಹಾಗೂ ಕುಮಟಾ ತಾಲೂಕುಗಳಲ್ಲಿ ಸೆ. 4 ಹಾಗೂ ಸೆ. 6 ರಂದು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ರವರೆಗೆ ಎಲ್ಲ ವೈನ್ ಶಾಪ್, ಬಾರ್ ಹಾಗೂ ಎಲ್ಲ ರೀತಿಯ ಮದ್ಯ ಮಾರಾಟ ಹಾಗೂ ಸಾಗಾಟವನ್ನು ಬಂದ್ ಮಾಡಿ ಆದೇಶಿಸಿದ್ದಾರೆ.