ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಸುಪ್ರೀಂ ಕೋರ್ಟ್ ಗೆ ಅರ್ಜಿ.! ಖಾರವಾಗಿ ಪ್ರಶ್ನಿಸಿ ಅರ್ಜಿ ವಜಾ ಮಾಡಿದ ಸುಪ್ರೀಂ.!

ನವದೆಹಲಿ: ಸಂಸ್ಕೃತ ಭಾಷೆಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಕೆ.ಜಿ ವಂಝಾರ ಎನ್ನುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಂ. ಆರ್. ಷಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ವಜಾ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರಿಗೆ ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಂಸತ್ ನಲ್ಲಿ ಚರ್ಚೆ ಮಾಡಬೇಕು, ನ್ಯಾಯಾಲಯದಲ್ಲಲ್ಲ. ನಾವು ಏಕೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಬೇಕು, ನಿಮ್ಮ ಪ್ರಚಾರ ನೀಡಬೇಕೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಭಾಷೆಯ ಬದಲಾವಣೆ ಬಗ್ಗೆ ಸಂವಿಧಾನದ ತಿದ್ದುಪಡಿಯಾಗಬೇಕು, ಭಾಷೆಯನ್ನು ಬದಲಿಸಲು ಕೋರ್ಟ್‌ ನಿಂದ ಸಾಧ್ಯವಿಲ್ಲ, ಹೀಗಾಗಿ ನಾವು ಈ ಅರ್ಜಿಯನ್ನು ವಿಚಾರಣೆ ನಡೆಸುವುದಿಲ್ಲ ಅರ್ಜಿ ವಜಾ ಮಾಡುತ್ತಿದ್ದೇವೆ ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೇ ಈ ಬಗ್ಗೆ ಮನವಿಗಳಿದ್ದರೇ ವಕೀಲರು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಸ್ವತಂತ್ರವಾಗಿದ್ದಾರೆ ಎಂದು ಹೇಳಿತು.

ನಿವೃತ್ತ ಐಎಎಸ್ ಅಧಿಕಾರಿ ಹಾಗೂ ವಕೀಲ ಕೆ.ಜಿ.ವಂಝಾರ ಈ ಪಿಐಎಲ್ ಸಲ್ಲಿಸಿದ್ದರು. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು, ಇಂತಹ ಕ್ರಮವು ದೇಶದ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಮತ್ತು ಹಿಂದಿಯನ್ನು ಒದಗಿಸುವ ಪ್ರಸ್ತುತ ಸಾಂವಿಧಾನಿಕ ನಿಬಂಧನೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿತ್ತು.