ಪೊಲೀಸ್ ಎಂದು ನಂಬಿಸಿ ಚಿನ್ನ ಎಗರಿಸಿದ್ದ ಖತರ್ನಾಕ್ ಖದೀಮ.! ಆರೋಪಿ ಮಹಮ್ಮದ್ ಯುಸುಫ್ ಕಂಬಿಹಿಂದೆ.!

ಚಿಕ್ಕೋಡಿ: ತಾನು ಪೊಲೀಸ್ ಎಂದು ನಂಬಿಸಿ ಮಹಿಳೆಯ ಚಿನ್ನಾಭರಣ ಎಗರಿಸಿದ್ದ ಆರೋಪಿ ಸಂಕೇಶ್ವರ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತನನ್ನು ಮಹಾರಾಷ್ಟ್ರದ ಸಾಂಗ್ಲಿಯ ಮಹಮ್ಮದ್ ಯುಸುಫ್ ಇರಾನಿ ಎಂದು ಗುರುತಿಸಲಾಗಿದೆ.

ಇತ್ತಿಚೆಗೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ವಿಜಯಲಕ್ಷ್ಮೀ ರಾಜು ಚೌಗಲೆ ಎಂಬ ಮಹಿಳೆಗೆ ತಾನು ಪೊಲೀಸ್ ಎಂದು ನಂಬಿಸಿ ಗಮನ ಬೇರೆಡೆ ಸೆಳೆದು 1.5 ಲಕ್ಷ ರೂ. ಬೆಲೆಯ ಚಿನ್ನಾಭರಣ ಕದ್ದು ಪರಾರಿಯಾಗಿದ್ದ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಎಸ್ಪಿ ಸಂಜೀವ ಪಾಟೀಲ‌ ಹಾಗೂ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಜಿ.ಬಿ ಕೊಂಗನೋಳಿ, ಸಿಬ್ಬಂದಿಗಳಾದ ಬಿ.ವಿ ಹುಲಕುಂದ, ಬಿ.ಕೆ ನಾಗನೂರ , ಎಮ್.ಎಮ್ ಕರಗುಪ್ಪಿ, ಎಮ್.ಎಮ್ಜಂ ಬಗಿ , ಬಿ.ಎಸ್ ಕಪರಟ್ಟಿ ಮುಂತಾದವರನ್ನು ಒಳಗೊಂಡ
ವಿಶೇಷ ತಂಡ ರಚಿಸಿ ಕಳ್ಳನ ಪತ್ತೆಗೆ ಜಾಲ‌ ಬೀಸಿದ್ದರು.

ನಿನ್ನೆ ಆರೋಪಿ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದ ಪೊಲೀಸರು ಸಂಶಯಾಸ್ಪದವಾಗಿ ಸಿಕ್ಕ ವ್ಯಕ್ತಿಯನ್ನು ವಿಚಾರಣೆ ನಡೆಸಿದ್ದಾರೆ. ಆಗ ಆರೋಪಿ ತಪ್ಪೊಪ್ಪಿಕೊಂಡಿದ್ದು, ನನ್ನೊಂದಿಗೆ ಇನ್ನೂ ಮೂರು ವ್ಯಕ್ತಿಗಳ ಬಗ್ಗೆ ಸುಳಿವು ನೀಡಿದ್ದಾನೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ತಲಾಶ್ ನದೆಸಿದ್ದಾರೆ. ಇನ್ನು ಆರೋಪಿತನಿಂದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ 1 ಬೈಕ್ ಹಾಗೂ ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.