ಹಾವೇರಿ: ಹಾನಗಲ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 85 ಲಕ್ಷ ರೂ. ಹಣ ಜಪ್ತಿ ಮಾಡಿ, ನಾಲ್ವರನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ನಿಜ್ಜೂರು ಗ್ರಾಮದ ಫಯಾಜ್ ಖಾನ್ (31 ವರ್ಷ), ಇಮ್ರಾನ್ ಖಾನ್ (27 ವರ್ಷ) ಮತ್ತು ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್ (23 ವರ್ಷ) ಮತ್ತು ಸಯ್ಯದ ಅಮೀನ್ (29 ವರ್ಷ) ನನ್ನು ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ನೀಲಿ ಬಣ್ಣದ ಗ್ಲಾಂಜಾ ಕಾರಿನಲ್ಲಿ ಅಕ್ರಮವಾಗಿ ಹಣವನ್ನು ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಕಡೆಗೆ ಸಾಗಾಣಿಕೆ ಮಾಡುತ್ತಿರುವ ವೇಳೆ ಪೊಲೀಸರು ಕಾರು ತಡೆದು ಹಣವನ್ನು ಜಪ್ತಿ ಮಾಡಿದ್ದಾರೆ.
ಕಾರಿನ ಒಳಗೆ ಬ್ಯಾಗಿನಲ್ಲಿದ್ದ ಐನೂರು, ಇನ್ನೂರು, ನೂರು ಮತ್ತು ಐವತ್ತು ರುಪಾಯಿ ಮುಖ ಬೆಲೆಯ ಎಂಬತ್ತೈದು ಲಕ್ಷ ರುಪಾಯಿ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಸ್ಪಿ ಹನುಮಂತರಾಯ ನೀಡಿದ ಮಾಹಿತಿ ಮೇರೆಗೆ
ಹಾನಗಲ್ ಸಿಪಿಐ ಶಿವಶಂಕರ ಗಣಾಚಾರಿ ಹಾಗೂ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದೆ. ಈ ಕುರಿತು
ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.