ಮುಂಡಗೋಡ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿದ ಭಾರೀ ಮಳೆಗೆ ಬಂಕಾಪೂರ ರಸ್ತೆಯ ಚರಂಡಿಗಳ ನೀರು ಮನೆಗಳಿಗೆ ನುಗ್ಗಿರುವುದಕ್ಕೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಚರಂಡಿಗಳನ್ನು ವೀಕ್ಷಣೆ ಮಾಡಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
2004-2005 ರಲ್ಲಿ ಪಟ್ಟಣದ ರಸ್ತೆಗಳ ಅಗಲಿಕರಣ ಸಮಯದಲ್ಲಿ ಗೂಡಂಗಡಿಗಳನ್ನು ತೆರವುಗೊಳಿಸಿ ಅವುಗಳ ಜಾಗದಲ್ಲಿ ಬೃಹತ್ ಆಕಾರದ ಚರಂಡಿಗಳನ್ನು ನಿರ್ಮಿಸಿ ಪುಟ್ ಪಾತ್ ನಿರ್ಮಿಸಲಾಗಿತ್ತು. ಆ ಚರಂಡಿಗಳಿಗೆ ವಾರ್ಡ್ ಗಳ ಸಣ್ಣ ಚರಂಡಿಗಳನ್ನು ಜೋಡಣೆ ಮಾಡಲಾಗಿದೆ. ಇದರಿಂದಾಗಿ ಒಂದೇ ಬಾರಿ ದೊಡ್ಡ ಪ್ರಮಾಣದಲ್ಲಿ ಮಳೆ ಆಗಿದ್ದರಿಂದ ಚರಂಡಿ ತುಂಬಿ ನೀರು ರಸ್ತೆಯ ಮೇಲೆ ಬರುತ್ತಿದೆ.
ಈಗಾಗಲೇ ಪಟ್ಟಣ ಪಂಚಾಯಿತಿಯವರು ಬಂಕಾಪೂರ ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡಿ ನೀರು ಹರಿಸಲು ಮುಂದಾಗಿದ್ದಾರೆ. ಕಳೆದ 7-8 ವರ್ಷಗಳಿಂದ ಪಟ್ಟಣ ಪಂಚಾಯಿತಿಯಲ್ಲಿ ಯಾವುದೇ ವಿಶೇಷವಾದ ಅನುದಾನ ಬರದೆ ಇರುವುದರಿಂದ ಚರಂಡಿಗಳ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಪಟ್ಟಣದಲ್ಲಿ ಹೆಚ್ಚು ಮಳೆಯಾದಾಗ ಬಂಕಾಪೂರ ರಸ್ತೆಯಲ್ಲಿ ಹೆಚ್ಚು ನೀರು ಹರಿದು ಬರುತ್ತದೆ. ಚರಂಡಿಗಳು ಚಿಕ್ಕದಾಗಿರುವುದರಿಂದ ನೀರು ಹರಿಯಲಾಗದೆ ಮನೆಗಳಿಗೆ ನುಗ್ಗುತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಬೃಹತ್ ಚರಂಡಿ ನಿರ್ಮಾಣ ಮಾಡಿ ನೀರು ಬೇರೆ ಬೇರೆ ಕಡೆಗಳಲ್ಲಿ ಹರಿಯುವಂತೆ ಮಾಡಿ ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ, ಜಯಸುಧಾ ಭೋವಿ ಹೇಳಿದರು.
ಬಂಕಾಪೂರ ರಸ್ತೆಯ ಎರಡು ಬದಿಗಳಲ್ಲಿ ಸಿಡಿ ನಿರ್ಮಾಣ ಮಾಡಲು 55 ಲಕ್ಷ ರೂಪಾಯಿ ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಸದ್ಯದಲ್ಲೇ ಕಾಮಗಾರಿ ಆರಂಭವಾಗಿ ರಸ್ತೆಯ ಮೇಲೆ ಚರಂಡಿಯ ನೀರು ಹರಿಯದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಇಂಜಿನಿಯರ್ ಶಂಕರ ದಂಡಿನ ಹೇಳಿದರು.