ಗಣೇಶನ ಸ್ವಾಗತಕ್ಕೆ ಸನ್ನದ್ಧಗೊಂಡ ಸಿದ್ದಾಪುರ.! ಹಬ್ಬದ ತಯಾರಿ ಬಲುಜೋರು.!

ಸಿದ್ದಾಪುರ:‌ ಗಣೇಶನ ಸ್ವಾಗತಕ್ಕೆ ಸಿದ್ದಾಪುರ ತಾಲೂಕು ಸಜ್ಜಾಗಿದ್ದು, ವರುಣನ ಕಿರಿಕಿರಿಯ ನಡುವೆಯೂ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಗಣೇಶ ಚತುರ್ಥಿಯಲ್ಲಿ ಆರಾಧಿಸುವ ವಿಘ್ನವಿನಾಯಕನ ಮೂರ್ತಿಗಳು ವಿವಿಧ ಬಣ್ಣಗಳ ಅಲಂಕಾರದಿಂದ ಕಂಗೊಳಿಸುತ್ತಿವೆ. ಕಲಾವಿದರ ಕುಂಚದಲ್ಲಿ ಅರಳಿದ ಗಣಪನ ಮೂರ್ತಿಗಳಿಗೆ ಕಳೆದೆರಡು ವರ್ಷಗಳಿಗಿಂತ ಈ ಬಾರಿ ಬೇಡಿಕೆ ಹೆಚ್ಚಾಗಿದೆ.

ಸಿದ್ದಾಪುರ ತಾಲೂಕಿನ 161 ಸ್ಥಳಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಗಣಪತಿ‌ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿವೆ. ಸಿದ್ದಾಪುರ ತಾಲೂಕಿನ ಮೂರ್ತಿ ತಯಾರಕರು ತಾಲೂಕಿನ ಹೆಗ್ಗರಣಿ ಬಳಿಯ ಮಣ್ಣನ್ನು ತಂದು ಗಣೇಶನನ್ನು ರೂಪಿಸಿದ್ದು, ವಾಟರ್ ಕಲರ್ ಪೇಂಟಿನಿಂದ ಗಣಪನಿಗೆ ಅಂತಿಮ‌ ಸ್ಪರ್ಷ ನೀಡಿದ್ದಾರೆ.

ಮಳೆಯದ್ದೇ ಭಯ.!

ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ‌ ಮಂಕಾಗಿದ್ದ ಹಬ್ಬವನ್ನು ಈ ಸಾಲಿನಲ್ಲಿ ವಿಜೃಂಭಣೆಯಿಂದ ಆಚರಿಸಲು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಮುಂದಾಗಿ ಈಗಾಗಲೇ ಮಂಟಪ ತಯಾರಿಸಿದ್ದಾರೆ. ಆದರೆ ಹಬ್ಬದ ಸಂಭ್ರಮಾಚರಣೆಗೆ ಮಳೆ ಅಡ್ಡಿ ಪಡಿಸಿದೆ‌.‌ ನಿರಂತರವಾಗಿ ಸುರಿದ ಜಿಟಿ ಜಿಟಿ ಮಳೆ ಕೆಲಸಕ್ಕೆ ತೊಂದರೆ ನೀಡುತ್ತಿದೆ.

ಕ್ಯಾಂಲೆಂಡರ್ ಪ್ರಕಾರ ಬುಧವಾರ ಗಣೇಶ ಚೌತಿ‌ಯಾಗಿದ್ದು ಇಂದು ಗೌರಿಯನ್ನು ತಂದು ಪ್ರತಿಷ್ಠಾಪಿಸಿ ತಿಂಡಿ-ತಿನಿಸುಗಳನ್ನು ಮಾಡಿ ಗೌರಿಗೆ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದರು.

ಇನ್ನು ಸಿದ್ದಾಪುರ ತರಕಾರಿ ಮಾರುಕಟ್ಟೆಯಲ್ಲಿ ಸೋಮವಾರ ಸಂತೆ ಜೋರಾಗಿ ನಡೆದಿದೆ. ಈರುಳ್ಳಿ, ಟೊಮೆಟೋಗಳ ದರ ಕೆಜಿಗೆ 30 ರೂ ಇದ್ದರೆ ಬೀನ್ಸ್ ಹಾಗೂ ಹಿರೇಕಾಯಿಯ ದರ 100 ರೂ ತಲುಪಿತ್ತು. ಇನ್ನು ಸೇವಂತಿಗೆ ಹೂವಿಗೆ 150, ಮಲ್ಲಿಗೆ ಮಾರಿಗೆ 150 ರೂ ದರ ಕಂಡಿದೆ. ಹಣ್ಣುಗಳಾದ ಸೇಬು 80-100, ಮೋಸಂಬಿ 60 ಹಾಗೂ ದಾಳಿಂಬೆ 160 ರೂಪಾಯಿಯಂತೆ ಮಾರಾಟವಾಗಿದೆ. ಒಟ್ಟಾರೆ ಹಬ್ಬಕ್ಕೆ ಸಿದ್ದಾಪುರ ತಾಲೂಕು ಸಂಪೂರ್ಣ ಸನ್ನದ್ಧವಾಗಿದೆ.