ಟ್ವಿನ್ ಟವರ್ ನೆಲಸಮಕ್ಕೆ ಕೌಂಟ್ ಡೌನ್.! ದೇಶದ ಚಿತ್ತ ನೋಯ್ಡಾದತ್ತ.!

ಉತ್ತರಪ್ರದೇಶ: ನೋಯ್ಡಾದಲ್ಲಿರುವ ನಿಯಮಬಾಹಿರವಾಗಿ ನಿರ್ಮಿಸಿದ್ದ 100 ಮೀಟರ್ ಎತ್ತರದ ಅವಳಿ ಕಟ್ಟಡವನ್ನು ಭಾನುವಾರ ನೆಲಸಮಗೊಳಿಸಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ನಿರ್ಮಿಸಿದ್ದ ಕಟ್ಟಡಗಳನ್ನು ಮಧ್ಯಾಹ್ನ 2.30 ಕ್ಕೆ ನೆಲಸಮಗೊಳಿಸಲು ಸಮಯ ನಿಗದಿಯಾಗಿದೆ. ಕಟ್ಟಡದ ಸುತ್ತಲಿನ 500 ಚದರ ಮೀಟರ್‌ ಪ್ರದೇಶವನ್ನು ನಿಷೇಧಿತ ವಲಯ ಎಂದು ಘೋಷಿಸಿ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ನೆಲಸಮಗೊಳಿಸುವ ಕಾರ್ಯ ಹೇಗಿರಲಿದೆ.?

ಈ ಅವಳಿ ಕಟ್ಟಡಗಳು ದೆಹಲಿಯ ಕುತುಬ್ ಮಿನಾರ್ ಗಿಂತಲೂ ಎತ್ತರದಲ್ಲಿದ್ದು, ವಾಟರ್ ಪಾಲ್ ಸ್ಫೋಟ ತಂತ್ರಜ್ಞಾನದಿಂದ 3,700 ಕೆ.ಜಿ ಸ್ಫೋಟಕಗಳನ್ನು ಬಳಸಿ, 15 ಸೆಕೆಂಡ್ ಗಳಿಗಿಂತ ಕಡಿಮೆ ಅವಧಿಯಲ್ಲಿ ಇವುಗಳನ್ನು ನೆಲಸಮಗೊಳಿಸಲಾಗುತ್ತದೆ.

ಸದ್ಯ ಸೆಕ್ಟರ್ 93 ಎ ಪ್ರದೇಶದಲ್ಲಿರುವ ಎಮರಾಲ್ಡ್ ಕೋರ್ಟ್ ಮತ್ತು ಎಟಿಎಸ್ ವಿಲೇಜ್ ಸೊಸೈಟಿಗಳ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯ ಬೆಳಗ್ಗೆ 8 ಗಂಟೆಗೆ ಪೂರ್ಣಗೊಂಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‌ಕಟ್ಟಡ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ನಾಗರಿಕರ ಸುರಕ್ಷತೆ ಹಾಗೂ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಪ್ರಾಂತೀಯ ಸಶಸ್ತ್ರ ಪಡೆಗಳ ಜೊತೆಗೆ 500 ಪೊಲೀಸ್‌ ಹಾಗೂ ಸಂಚಾರಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಡಿಸಿಪಿ ರಾಜೇಶ್‌ ಎಸ್‌. ತಿಳಿಸಿದ್ದಾರೆ.