ಗೋಕರ್ಣ: ಪಟ್ಟೆ ವಿನಾಯಕ ಗೆಳೆಯರ ಬಳಗದವರು ಇಲ್ಲಿನ ಕೋಟಿತೀರ್ಥ ಸ್ವಚ್ಚತೆಗಾಗಿ ವಿವಿಧ ಜಾತಿಯ ಮೀನುಗಳನ್ನು ಶನಿವಾರ ಸಂಜೆ ಶಿವಮೊಗ್ಗಾದಿಂದ ತಂದು ಬಿಟ್ಟಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕೋಟಿತೀರ್ಥ ಹೊಲಸು ತುಂಬಿ ಗಬ್ಬೆದ್ದು ನಾರುತ್ತಿತ್ತು. ಆ ವೇಳೆ ಇದೇ ಸಂಘಟನೆಯವರು ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಚಗೊಳಿಸಿ ನಿರ್ವಹಣೆ ಮಾಡಿಕೊಂಡು ಬಂದಿತ್ತು. ಕಳೆದ ಬೇಸಿಗೆಯಲ್ಲಿ ಕೋಟೊತೀರ್ಥದ ನೀರು ಖಾಲಿ ಮಾಡಿ ಹೂಳೆತ್ತಿ ಸ್ವಚ್ಚಗೊಳಿಸಲಾಗಿತ್ತು. ನಂತರ ನೀರು ತುಂಬಿ ಸ್ವಚ್ಚ ಸುಂದರ ಕೆರೆಯಾಗಿ ಮಾರ್ಪಟ್ಟಿತ್ತು.
ನೀರು ತುಂಬಿ ಮೂರು ತಿಂಗಳ ಕಳೆದರು ಕೆರೆ ಆರಿಸದೇ, ಮೀನೂ ಬಿಡದ ಕಾರಣ ಮತ್ತೆ ಹೊಲಸು ತುಂಬಲು ಪ್ರಾರಂಭವಾಗಿತ್ತು. ಗ್ರಾಮ ಪಂಚಾಯಿತಿ ಸಹ ಈ ಬಗ್ಗೆ ಗಮನ ಹರಿಸದ ಕಾರಣ ಸ್ವತಃ ಪಟ್ಟೆ ವಿನಾಯಕ ಗೆಳೆಯರ ಬಳದವರು ಶಿವಮೊಗ್ಗಾದಿಂದ 15 ಸಾವಿರ ರೂಪಾಯಿಗೂ ಅಧಿಕ ವೆಚ್ಚದಲ್ಲಿ 20 ಸಾವಿರ ಮೀನಿನ ಮರಿಗಳನ್ನು ತಂದು ಬಿಟ್ಟಿದ್ದಾರೆ.
ಕೋಟಿತೀರ್ಥ ಸ್ವಚ್ಚಗೊಂಡ ನಂತರವೂ ಇದೇ ಸಂಘಟನೆ ಪಿಂಡ ಬಿಡಲು ಪ್ರತ್ಯೇಕ ವ್ಯವಸ್ಥೆ ಮತ್ತು ತಾಜ್ಯ ಹಾಕಲು ತೊಟ್ಟಿಗಳನ್ನು ಮಾಡಿತ್ತು. ಈಗ ವಿವಿಧ ಹಂತದಲ್ಲಿ ನೀರನ್ನು ಸ್ವಚ್ಚ ಗೊಳಿಸುವ ಕಾಟ್ಲಾ, ರಘು, ಗೌರಿ, ಮೃಗಲಾ ಜಾತಿಯ ಮೀನುಗಳನ್ನು ತಂದು ಬಿಡಲಾಗಿದೆ. ಇದರಿಂದ ಕೋಟಿತೀರ್ಥದ ಸ್ವಚ್ಚತೆಗೆ ಪಟ್ಟೆ ವಿನಾಯಕ ಗೆಳೆಯರ ಬಳಗದವರು ಶ್ರಮಿಸುತ್ತಿರುವುದಕ್ಕೆ ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗಿದೆ.