ಹೊನ್ನಾವರ: ಜನಮನ್ನಣೆ ಪಡೆದ ದಕ್ಷ ಪೊಲೀಸ್ ಅಧಿಕಾರಿ ಸಾವಿತ್ರಿ ನಾಯಕ ಹೊನ್ನಾವರ ಪೊಲೀಸ್ ಠಾಣೆಗೆ ಮತ್ತೊಮ್ಮೆ ಪಿಎಸೈ ಆಗಿ ಅಧಿಕಾರ ಸ್ವೀಕರಿಸುವ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ.
1995 ರಂದು ಪೊಲೀಸ್ ಕಾನಸ್ಟೇಬಲ್ ಆಗಿ ಇಲಾಖೆಗೆ ಸೇರ್ಪಡೆಯಾಗಿ ಬೆಂಗಳೂರಿನಲ್ಲಿ ವೃತ್ತಿ ಜೀವನ ಆರಂಭಿಸಿದರು. ನಂತರ ಜಿಲ್ಲೆಗೆ ಆಗಮಿಸಿ ಹೆಡ್ ಕಾನಸ್ಟೇಬಲ್, ಎಎಸೈ ಆಗಿ ಸಿದ್ದಾಪುರ, ಕುಮಟಾ, ಹೊನ್ನಾವರ, ಕಾರವಾರದಲ್ಲಿ ಸೇವೆ ಸಲ್ಲಿಸಿ ಕರಾವಳಿ ಕಾವಲು ಪಡೆಗೆ ಪಿಎಸೈ ಆಗಿ ಬಡ್ತಿ ಹೊಂದಿದ್ದರು. ನಂತರ ಹೊನ್ನಾವರದಲ್ಲಿ ಕ್ರೈಂ ವಿಭಾಗದ ಪಿಎಸೈ ಆಗಿ ಸೇವೆ ಸಲ್ಲಿಸಿ ತಮ್ಮ ದಕ್ಷತೆಯ ಮೂಲಕ ಜನಮನ್ನಣೆ ಗಳಿಸಿದ್ದರು.
ಕಾಸರಕೋಡ ಟೊಂಕಾದ ವಾಣಿಜ್ಯ ಬಂದರು ವಿರೋಧಿಸಿ ಮೀನುಗಾರರ ಹೋರಾಟದ ವೇಳೆ ಬಂದೋಬಸ್ತ್ ಸಮಯದಲ್ಲಿ ಸೂಕ್ತ ಮಾಹಿತಿ ಪಡೆದು ಪರಿಸ್ಥಿತಿ ವಿಕೋಪಕ್ಕೆ ತಲುಪದಂತೆ ಎಚ್ಚರ ವಹಿಸುವ ಮೂಲಕ ಇಲಾಖೆಯಿಂದ ಪ್ರಶಂಸೆಗೂ ಪಾತ್ರರಾಗಿದ್ದರು. 25 ಕ್ಕೂ ಅಧಿಕ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಿಬ್ಬಂದಿಗಳ ಸಹಕಾರದ ಮೇರೆಗೆ ಭೇದಿಸುವಲ್ಲಿ ಯಶ್ವಸಿಯಾಗಿದ್ದರು. ನಂತರ ಕಾರವಾರದಲ್ಲಿ ಸೇವೆ ಸಲ್ಲಿಸಿ ಇದೀಗ ಹೊನ್ನಾವರದಲ್ಲಿ ಮತ್ತೆ ಸೇವೆ ಸಲ್ಲಿಸಲು ಆಗಮಿಸಿದ್ದಾರೆ.
ಪೊಲೀಸ್ ಎಂದರೆ ಭಯದಿಂದ ಇರುವುದೇ ಹೆಚ್ಚು. ಅವರು ಎಲ್ಲರನ್ನೂ ಅಂತರದಿಂದ ಕಾಣುವುದೇ ಹೆಚ್ಚು ಎನ್ನುವ ಭಾವವಿದೆ. ಆದರೆ ಅದಕ್ಕೆ ತದ್ವಿರುದ್ಧವಾಗಿರುವಂತೆ ಕೆಲವು ಅಧಿಕಾರಿಗಳು ‘ಪೊಲೀಸ್ ಎಂದರೆ ಭಯ ಅಲ್ಲ ಭರವಸೆ’ ಎನ್ನುವುದು ಸಾಬೀತು ಪಡಿಸುತ್ತಾರೆ. ಆ ಸಾಲಿನಲ್ಲಿ ಸೇರುವವರು ಪಿಎಸೈ ಸಾವಿತ್ರಿ ನಾಯಕ್. ಠಾಣೆಗೆ ಬಂದವರಾಗಲಿ ಅಥವಾ ಕಾರ್ಯಕ್ಷೇತ್ರ ಸ್ಥಳದಲ್ಲಾಗಲಿ ಪೊಲೀಸ್ ಎನ್ನುವ ಅಹಂ ತೊರ್ಪಡಿಸದೇ ಮೊದಲು ಸೌಜನ್ಯತೆ ತೋರುತ್ತಾರೆ. ರಸ್ತೆ ಅಪಘಾತವಾದ ಸಂದರ್ಭದಲ್ಲಿ ಅಥವಾ ಇನ್ನಿತರ ಕ್ಲಿಷ್ಟ ಪರಿಸ್ಥಿತಿಯಲ್ಲಿ ನೊಂದಿರುವವರಿಗೆ ಅವರ ಪರಿಸ್ಥಿತಿ ಅವಲೋಕಿಸಿ ಮೊದಲು ಮಾನವೀಯತೆ ತೋರುತ್ತಾರೆ.