ಭಟ್ಕಳ: ಚುನಾವಣಾ ಆಯೋಗದ ನಿರ್ದೇಶನದಂತೆ ಆಧಾರ್ ಕಾರ್ಡನೊಂದಿಗೆ ಗುರುತಿನ ಚೀಟಿಯನ್ನು ಜೋಡಣೆ ಮಾಡುವ ಯೋಜನೆಯನ್ನು ಭಟ್ಕಳದ ಎಲ್ಲಾ ಸಾರ್ವಜನಿಕರು ಸಹಕರಿಸಿ ಜೋಡಣೆ ಮಾಡಿಕೊಳ್ಳಬೇಕು ಎಂದು ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಅವರು ಪತ್ರಿಕಾ ಪ್ರಕಟಣೆ ಮೂಲಕ ಜನರಲ್ಲಿ ಕೋರಿದ್ದಾರೆ.
ಪ್ರತಿಯೋರ್ವ ಮತದಾರರೂ ಕೂಡಾ ತಮ್ಮ ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡನೊಂದಿಗೆ ಇಲ್ಲವೇ ತಮ್ಮ ಇತರೇ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡಿಕೊಳ್ಳುವುದು ಅವಶ್ಯಕವಾಗಿದ್ದು ಪ್ರತಿಯೋರ್ವರೂ ತಮ್ಮ ಮೊಬೈಲ್‌ನಿಂದ, ತಹಸೀಲ್ದಾರ್ ಕಚೇರಿ ಅಥವಾ ಪುರಸಭಾ ಕಚೇರಿಯಲ್ಲಿ ತೆರೆದಿರುವ ಕೌಂಟರ್‌ನಲ್ಲಿ ಇಲ್ಲವೇ ಬಿಎಲ್ಓಗಳು ನಿಮ್ಮಲ್ಲಿಗೆ ಬಂದಾಗ ಜೋಡಣೆ ಮಾಡಿಕೊಳ್ಳಬೇಕು.
ಸರಕಾರ ಮತ್ತು ಚುನಾವಣಾ ಆಯೋಗವು ಚುನಾವಣಾ ಮತದಾರರ ಪಟ್ಟಿಯನ್ನು ಶುದ್ಧಗೊಳಿಸಲಿಕ್ಕೋಸ್ಕರ ಈ ಒಂದು ಕ್ರಮಕ್ಕೆ ಮುಂದಾಗಿದ್ದು, ಆಧಾರ್ ಇಲ್ಲವೇ ಗುರುತಿನ ಚೀಟಿಯನ್ನು ನಿಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡುವುದರಿಂದ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಯಾಗಿದ್ದರೆ ಅದನ್ನು ಪತ್ತೆ ಹಚ್ಚುವುದು ಸುಲಭವಾಗುತ್ತದೆ. ಅಲ್ಲದೇ ಮುಂದಿನ ಚುನಾವಣಾ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲು ಕೂಡಾ ಇದು ಬಹಳ ಸಹಕಾರಿಯಾಗುತ್ತದೆ. ಪ್ರತಿಯೋರ್ವ ಮತದಾರರು ಕೂಡಾ ವಿಳಂಬ ಮಾಡದೇ ಆಧಾರ್ ಇಲ್ಲದೇ ಗುರುತಿನ ಚೀಟಿಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡಿಕೊಳ್ಳಿ ಎಂದೂ ಅವರು ಕರೆ ನೀಡಿದ್ದಾರೆ.