ಶಿರಸಿ: ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆಗಾಗಿ ಅನುಮತಿ ನೀಡಲು ಇಲ್ಲಿಯ ನಗರಸಭೆ ಆವರಣದಲ್ಲಿ ಏಕಗವಾಕ್ಷಿ ಕೊಠಡಿಯನ್ನು ಶುಕ್ರವಾರದಿಂದ ಆರಂಭಿಸಲಾಗಿದೆ.
ಕೊವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ, ಮೂರ್ತಿ ಸ್ಥಾಪನೆಗೆ ಹಲವು ಕಟ್ಟುಪಾಡುಗಳಿದ್ದವು. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಉತ್ಸವ ಆಚರಣೆ ಮಂಕಾಗಿತ್ತು. ಈ ವರ್ಷ ಈ ಎಲ್ಲ ತೊಡಕು ನಿವಾರಣೆಯಾದ್ದರಿಂದ ಜನತೆಯಲ್ಲೂ ಆಸಕ್ತಿ ಮೂಡಿದೆ.
ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪನೆಗೆ ಸ್ಥಳೀಯ ಆಡಳಿತದ ಅನುಮತಿ, ಹೆಸ್ಕಾಂ ಅನುಮತಿ, ಪೊಲೀಸ್ ಇಲಾಖೆ ಅನುಮತಿ ಸೇರಿದಂತೆ ವಿವಿಧ ಇಲಾಖೆಗಳ ಒಪ್ಪಿಗೆ ಬೇಕಾಗುತ್ತದೆ. ಸಾರ್ವಜನಿಕರು ಪ್ರತಿಯೊಂದು ಕಾರ್ಯಕ್ಕೂ ಅಲೆಯುವ ಬದಲು ಒಂದೇ ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.
ಶಿರಸಿ ತಾಲೂಕಿನಲ್ಲಿ ನೂರಕ್ಕೂ ಅಧಿಕ ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಸ್ಥಾಪಿಸಲಾಗುತ್ತದೆ. ಈ ವರ್ಷ ಇದುವರೆಗೆ 48 ಗಣಪತಿ ಸ್ಥಾಪನೆ ಅಂತಿಮ ಹಂತದಲ್ಲಿದೆ. ಸಾರ್ವಜನಿಕ ಗಣೇಶ ಮೂರ್ತಿ ಸ್ಥಾಪಿಸುವವರು ಅನುಮತಿ ಪಡೆಯುವಲ್ಲಿ ವಂಚಿತರಾಗಬಾರದು ಎಂದು ಏಕಗವಾಕ್ಷಿ ಆರಂಭಿಸಲಾಗಿದೆ ಎನ್ನುತ್ತಾರೆ ಸಿಪಿಐ ರಾಮಚಂದ್ರ ನಾಯಕ.