ಕಾರವಾರ: ಅಕ್ರಮ ಗೋ ಸಾಗಾಟದ ಕುರಿತು ಯಾರಿಗೇ ಮಾಹಿತಿ ಲಭಿಸಿದರೂ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಅಕ್ರಮ ಗೋ ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಬುಧವಾರ ಒಂದೇ ದಿನ ಜಿಲ್ಲೆಯ 4 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಅಂಕೋಲಾ, ಹೊನ್ನಾವರದ ಮಂಕಿ, ಶಿರಸಿ ಶಹರ ಮತ್ತು ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರು ಒಟ್ಟೂ 19 ಆಕಳು, 2 ಹೋರಿ, 7 ಕರುಗಳನ್ನು ರಕ್ಷಿಸಿದ್ದಾರೆ. ಅಲ್ಲದೆ ಸಾಗಾಟಕ್ಕೆ ಬಳಸಿದ 4 ವಾಹನಗಳನ್ನು ವಶಕ್ಕೆ ಪಡೆದು 15 ಜನ ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಈ ಬಗ್ಗೆ ನಿಗಾ ವಹಿಸಲಾಗಿದೆ. ಇನ್ನು ಅಕ್ರಮ ಗೋ ಸಾಗಾಟದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಜಿಲ್ಲಾ ಕಂಟ್ರೋಲ್ ರೂಮ್ ಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದ್ದು, ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ. ತಿಳಿಸಿದ್ದಾರೆ.



