‘ಅಧಿಕಾರಿಗಳು ಪರ್ಸಂಟೇಜ್ ತಗೊಳ್ಳಿ, ಆದರೆ ಸ್ಥಳದಲ್ಲಿ ಕಾಮಗಾರಿ ಆಗಲಿ’ – ಕಾಂಗ್ರೆಸ್ ಆರೋಪ: ಡಿಡಿಪಿಐ ಗರಂ.!

ಯಲ್ಲಾಪುರ: ಪಟ್ಟಣದ ಗಾಂಧಿಕುಟೀರದಲ್ಲಿ ಡಿಡಿಪಿಐ ಪಿ. ಬಸವರಾಜ ಅವರ ಅಧ್ಯಕ್ಷತೆಯಲ್ಲಿ ತಾ.ಪಂ ಜಮಾಬಂದಿ ಸಭೆ ನಡೆಯಿತು.

ಮಾವಿನಮನೆ ಹಾಗೂ ಆನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದಿನ ಸಾಲಿನ ತಾ.ಪಂ ಅನುದಾನದಡಿ ಕಾಮಗಾರಿ ಕೈಗೊಳ್ಳದೇ ಬಿಲ್ ಮಾಡಲಾಗಿದೆ ಎಂದು ಕಾಂಗ್ರೆಸ್ ಪ್ರಮುಖರು ಸಭೆಗೆ ಬಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭೆಯ ಬಹುಪಾಲ ಸಮಯ ಆರೋಪಗಳ ಸುರಿಮಳೆಯಲ್ಲಿಯೇ ಕಳೆಯಿತು. ಅಧಿಕಾರಿಗಳು ಮಾಹಿತಿ ನೀಡದೇ, ಸಾರ್ವಜನಿಕರ ಗೈರಿನ ನಡುವೆ ಸಭೆ ನಡೆಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡರಾದ ಎನ್.ಕೆ.ಭಟ್, ಎಸ್.ಎಂ.ಭಟ್ಟ ಬಾಗಿನಕಟ್ಟಾ, ಮಹಾಬಲೇಶ್ವರ ಬಾರೆ, ಬ್ಲಾಕ್ ಅಧ್ಯಕ್ಷ ವಿ.ಎಸ್.ಭಟ್ಟ, ನ್ಯಾಯವಾದಿ ಕೆ.ಎನ್.ಭಟ್ಟ ಆನಗೋಡ ಆಕ್ಷೇಪಿಸಿದರು.

ಕಳೆದ ಅವಧಿಯಲ್ಲಿ ಆನಗೋಡ ಹಾಗೂ ಮಲವಳ್ಳಿ ಗ್ರಾ.ಪಂನಲ್ಲಿ ತಾ.ಪಂ ಅನುದಾನದ ಕೆಲಸ ಮಾಡದೇ ಬಿಲ್ ಮಾಡಲಾಗಿದೆ. ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕಾಮಗಾರಿ ನಾಮ ಫಲಕ ಅಳವಡಿಸಿಲ್ಲ. ಎಸ್.ಸಿ, ಎಸ್ಟಿ ಅನುದಾನದಲ್ಲಿ ಕೆಲಸವಾಗಿಲ್ಲ ಎಂದು ಗಂಭೀರವಾಗಿ ಆರೊಪಿಸಿದರು.

ತಾ.ಪಂ ಇಒ ಜಗದೀಶ ಕಮ್ಮಾರ ಪ್ರತಿಕ್ರಿಯಿಸಿ, ಈ ಕುರಿತು ಪರಿಶೀಲನೆ ನಡೆಸಲಾಗಿದೆ. ಆನಗೋಡದಲ್ಲಿ ಸದಸ್ಯರ ಸೂಚನೆಯಂತೆ ಕೆಲಸ ಬದಲಾವಣೆ ಮಾಡಲಾಗಿತ್ತು ಎಂಬ ಸಮಜಾಯಿಷಿ ನೀಡಿದರು. ಡಿಡಿಪಿಐ ಬಸವರಾಜ್ ಮಧ್ಯಪ್ರವೇಶಿಸಿ, ಹಳೆಯ ಕಾಮಗಾರಿಯನ್ನು ಒಂದು ಹಂತದಲ್ಲಿ ಪರಿಶೀಲನೆ ಮಾಡಲಾಗಿದೆ. ಇನ್ನೊಮ್ಮೆ ತಾಂತ್ರಿಕ ಪರಿಣಿತರ ತಂಡದ ಜೊತೆ ಸೇರಿ ಕಾಮಗಾರಿ ಪರಿಶೀಲನೆ ಮಾಡಲಾಗುತ್ತದೆ. ಕಾಮಗಾರಿ ಆಗದೇ ಇದ್ದಲ್ಲಿ ಮೇಲಾಧಿಕಾರಿಗಳಿಗೆ ವರದಿ ಮಾಡಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.

ಅಧಿಕಾರಿಗಳು ಪರ್ಸಂಟೇಜ್ ತಗೊಳ್ಳಿ, ಆದರೆ ಸ್ಥಳದಲ್ಲಿ ಕಾಮಗಾರಿ ಆಗಲಿ ಎಂಬ ಕಾಂಗ್ರೆಸ್ ಮುಖಂಡರ ಮಾತಿಗೆ ಡಿಡಿಪಿಐ ಗರಂ ಆಗಿ, ಶಿಷ್ಟಾಚಾರ ಬಿಟ್ಟು ಮಾತನಾಡಬೇಡಿ. ಜಮಾಬಂದಿ ಕಲಾಪ ನಡೆಯಲು ಅವಕಾಶ ನೀಡಿ. ಮಂಡನೆಯಾದ ವಿಷಯದಲ್ಲಿ ಆಕ್ಷೇಪಗಳಿದ್ದರೆ ಹೇಳಿ ಎಂದು ಆರೋಪ, ಸಮಜಾಯಿಷಿಗಳಿಗೆ ತೆರೆ ಎಳೆದರು.
ನಂತರ ಜಮಾಬಂದಿ ಸಭೆ ನಡೆಯಿತು. ಆಡಳಿತಾಧಿಕಾರಿ ನಟರಾಜ್ ಟಿ.ಎಚ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.