ಸಿಬ್ಬಂದಿಗಳಿಲ್ಲದೇ ಬಿಕೋ ಎನ್ನುತ್ತಿದೆ ಪಶು ಆಸ್ಪತ್ರೆ.! ಜಾನುವಾರುಗಳಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ.!

ಸಿದ್ದಾಪುರ: ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಸಿಬ್ಬಂದಿ ಇಲ್ಲದೇ ಬಿಕೋ ಎನ್ನುತ್ತಿದೆ. ಇದರಿಂದ ಹೈನುಗಾರರು ತೊಂದರೆ ಎದುರಿಸುವಂತಾಗಿದೆ. ಭೌಗೋಳಿಕವಾಗಿ ದೊಡ್ದ ವ್ಯಾಪ್ತಿ ಹೊಂದಿರುವ ತಾಲೂಕಿನಲ್ಲಿ, ಪಶುಪಾಲನಾ ಇಲಾಖೆಯಿಂದ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ನೀಡಲು ಸಿಬ್ಬಂದಿಗಳಿಲ್ಲದ ಸ್ಥಿತಿ ಬಂದು ತಲುಪಿದೆ. ಕೆಲ ಪಶು ಚಿಕಿತ್ಸಾಲಯದ ಬಾಗಿಲು ತೆರೆಯಲು ಸಹ ಸಿಬ್ಬಂದಿಗಳಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಇಬ್ಬರೇ ವೈದ್ಯರು.!

ತಾಲೂಕಿನಲ್ಲಿ 10 ಪಶು ಚಿಕಿತ್ಸಾಲಯ ಹಾಗೂ 3 ಪ್ರಾಥಮಿಕ ಚಿಕಿತ್ಸಾಲಯ ಸೇರಿ ಒಟ್ಟು 13 ಪಶು ಚಿಕಿತ್ಸಾಲಯಗಳಿವೆ. ಆದರೆ ಇರುವುದು ಮಾತ್ರ ಇಬ್ಬರು ವೈದ್ಯರು. ಅದರಲ್ಲಿ ಒಬ್ಬರು ಸಹಾಯಕ ನಿರ್ದೇಶಕರಾಗಿದ್ದು ಸಭೆ ಮತ್ತಿತರ ಕಾರ್ಯಕ್ರಮಗಳನ್ನು ನಿಭಾಯಿಸಬೇಕಿದೆ. ತಾಲೂಕಿಗೆ ಬೇಕಾಗಿರುವ 13 ವೈದ್ಯರ ಪೈಕಿ ಹಾಲಿ ಇಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವಶ್ಯವಿರುವ 56 ಸಿಬ್ಬಂದಿಗಳಲ್ಲಿ 12 ಜನ ಕರ್ತವ್ಯದಲ್ಲಿದ್ದಾರೆ.

ಜಾನುವಾರುಗಳಿಗೆ ಸಕಾಲಕ್ಕೆ ಸಿಗದ ಚಿಕಿತ್ಸೆ.!

ಇಲಾಖೆಯೇ ರೋಗಗ್ರಸ್ಥವಾಗಿರುವಾಗ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಸಾಧ್ಯವೇ? ಎನ್ನುವ ಪ್ರಶ್ನೆ ತಲೆದೋರಿದೆ. ತಾಲೂಕಿನಲ್ಲಿ ಇಲಾಖೆಯ ಗಣತಿ ಪ್ರಕಾರ 48 ಸಾವಿರ ಜಾನುವಾರುಗಳಿದ್ದು, ರೈತಾಪಿ ಸಮುದಾಯಕ್ಕೆ ಹೈನುಗಾರಿಕೆ ಸಹ ಆದಾಯ ಮೂಲಗಳಲ್ಲಿ ಒಂದಾಗಿದೆ. ಹೈನುಗಾರಿಕೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಾದ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಿಬ್ಬಂದಿ ಕೊರತೆಯಿಂದ ಲೆಕ್ಕಕ್ಕೆ ಇಲ್ಲದಂತಾಗಿದೆ. ರೈತರ ಕರೆಗೆ ಸ್ಪಂದಿಸಲಾಗದೇ ಹೈನುಗಾರರ ಕೆಂಗಣ್ಣಿಗೆ ಗುರಿಯಾಗುತ್ತಿದೆ.

ಇರುವ ಸಿಬ್ಬಂದಿಗಳಿಗೆ ಕೆಲಸದ ಒತ್ತಡ.!

ಇಲಾಖೆಯಲ್ಲಿ ಪ್ರತಿಶತ 80 ಕ್ಕೂ ಅಧಿಕ ಸಿಬ್ಬಂದಿ ಕೊರತೆ ಇರುವುದರಿಂದ ಇರುವ ಸಿಬ್ಬಂದಿಗಳೆ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಕಪಕ್ಕದ ಗ್ರಾಮಗಳ ಪಶು ಆಸ್ಪತ್ರೆಗಳಿಗೆ ಪಶು ವೈದ್ಯಾಧಿಕಾರಿಗಳನ್ನು ನಿಯೋಜನೆ ಮೇಲೆ ಕಳುಹಿಸಿ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ಮತ್ತೆ ಕೆಲ ಗ್ರಾಮಗಳ ಪಶು ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಇಲ್ಲದ ಕಾರಣ ರೈತರು ತಮ್ಮ ಕೃಷಿ ಕೆಲಸ ಬಿಟ್ಟು ದೂರದ ಪಶು ಆಸ್ಪತ್ರೆಗಳಿಗೆ ತೆರಳಿ ಜಾನುವಾರುಗಳ ತಪಾಸಣೆ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಒಟ್ಟರೆ ಸರ್ಕಾರಿ ಇಲಾಖೆಗಳು ಸಿಬ್ಬಂದಿಗಳ ಕೊರತೆಯಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಇಷ್ಟಾದರೂ ಸರ್ಕಾರವಾಗಲೀ ಸಂಬಂಧಿಸಿದ ಅಧಿಕಾರಿಗಲಾಗಲೀ ಯಾವುದೇ ಕ್ರಮ ತೆಗೆದುಕೊಳ್ಳದೇ ಮೂಕರಾಗಿರುವುದು ಜನರಲ್ಲಿ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಖಾಲಿಯಿರುವ ಹುದ್ದೆಗಳಿಗೆ ಸ್ದಿಬ್ಬಂದಿಗಳನ್ನು ನೇಮಿಸಿ ಸಮಯಕ್ಕೆ ಸರಿಯಾಗಿ ಸ್ಪಂದಿಸಲಿ ಎನ್ನುವುದು ಎಲ್ಲರ ಆಶಯವಾಗಿದೆ.