
ಘಟ್ಟದ ಮೇಲೆ ಮಳೆ ಬಂತು ಎಂದರೆ ಸಾಕು ಈ ಗ್ರಾಮಗಳ ಜನ ಹೊರ ಊರಿನ ಸಂಪರ್ಕವನ್ನೇ ಕಳೆದುಕೊಳ್ಳುತ್ತಾರೆ. ತುಂಬಿ ಹರಿಯುವ ನದಿಯಲ್ಲಿ ಸೇತುವೆ ಮೇಲೆ ನೀರು ಬಂದರೂ ಜೀವ ಪಣಕ್ಕಿಟ್ಟು ಗ್ರಾಮಕ್ಕೆ ತೆರಳುವ ಇವರ ಸ್ಥಿತಿ ದೇವರಿಗೆ ಪ್ರೀತಿ. ಹಾಗಾದರೆ ಯಾವುದು ಆ ಗ್ರಾಮ.? ಅಲ್ಲಿಯ ಜನರ ಸಂಕಷ್ಟದ ಕುರಿತು ಬೆಳಕು ಚೆಲ್ಲುವ ವಿಶೇಷ ವರದಿ ಇಲ್ಲಿದೆ.

ಘಟ್ಟದ ಮೇಲೆ ಮಳೆ ಬಂದ್ರೆ ಈ ಗ್ರಾಮದ ಸಂಪರ್ಕವೇ ಕಡಿತ.!
ಜೀವ ಪಣಕ್ಕಿಟ್ಟು ಸೇತುವೆ ಮೇಲೆ ನೀರು ಹರಿಯುತಿದ್ದರೂ, ತಮ್ಮ ವಾಹನಗಳನ್ನು ದಾಟಿಸುವ ಸ್ಥಿತಿ ಅಂಕೋಲಾ ತಾಲೂಕಿನ ಪಣಸಗುಳಿ ಗ್ರಾಮಸ್ಥರಿಗೆ ಬಂದೊದಗಿದೆ. ಹೌದು.! ನಿನ್ನೆಯಷ್ಟೇ ಸೇತುವೆ ದಾಟಲು ಹೋದ ಲಾರಿಯೊಂದು ನೀರಿನಲ್ಲಿ ತೇಲಿ ಹೋದ ಘಟನೆ ನಡೆದುಬಿಟ್ಟಿದೆ.
ಕಳೆದ ಎರಡು ವರ್ಷದಿಂದ ಸುರಿದ ಅಬ್ಬರದ ಮಳೆ ಈ ಗ್ರಾಮದಿಂದ ಅಂಕೋಲಾ ಹಾಗೂ ಯಲ್ಲಾಪುರ ತಾಲೂಕನ್ನು ಸಂಪರ್ಕಿಸುವ ಸೇತುವೆಗಳನ್ನು ಗಂಗಾವಳಿ ನದಿ ಆಹುತಿ ತೆಗೆದುಕೊಂಡಿತ್ತು. ಹೀಗಾಗಿ ಹೊಸ ಸೇತುವೆ ನಿರ್ಮಾಣವಾಗುವವರೆಗೆ ಪಣಸಗುಳಿ, ಕೈಗಡಿ ಸೇರಿದಂತೆ ಹಲವು ಗ್ರಾಮದ ಸಂಪರ್ಕಕ್ಕಾಗಿ ಪೈಪುಗಳನ್ನು ಅಳವಡಿಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗಿತ್ತು.

ಸೇತುವೆ ಮೇಲೆ ಹರಿಯುವ ನದಿ ನೀರಿನಲ್ಲೇ ಸೇತುವೆ ದಾಟುವ ಗ್ರಾಮಸ್ಥರು.!
ಈ ಸೇತುವೆ ಅತೀ ಕೆಳಭಾಗದಲ್ಲಿ ಇರುವುದರಿಂದ ಘಟ್ಟದ ಮೇಲೆ, ಹುಬ್ಬಳ್ಳಿ, ಧಾರವಾಡದಲ್ಲಿ ಮಳೆಯಾದರೆ ಗಂಗಾವಳಿ ನದಿ ಉಕ್ಕಿ ಈ ಸೇತುವೆಯ ಮೇಲೆ ಹರಿಯುತ್ತದೆ. ಇದರಿಂದಾಗಿ ಪ್ರವಾಹ ಇಳಿಯುವವರೆಗೂ ಈ ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಳ್ಳುತ್ತಿವೆ. ಇನ್ನು ಗ್ರಾಮಕ್ಕೆ ಅವಷ್ಯ ವಸ್ತುಗಳನ್ನು ಕೊಂಡೊಯ್ಯಲು ಜನ ಸೇತುವೆ ಮೇಲೆ ನೀರು ಹರಿದರೂ ಜೀವ ಪಣಕ್ಕಿಟ್ಟು ಇದೇ ಸೇತುವೆಯಲ್ಲಿ ಸಂಚರಿಸುತಿದ್ದಾರೆ. ಹೀಗಾಗಿ ಶೀಘ್ರದಲ್ಲಿ ಸೇತುವೆ ನಿರ್ಮಾಣ ಮಾಡುವಂತೆ ಗ್ರಾಮದ ಜನ ಆಗ್ರಹಿಸಿದ್ದಾರೆ.

ಸೇತುವೆ ದಾಟಲು ಹೋಗಿ ನದಿಗೆ ಬಿದ್ದ ಲಾರಿ.!
ಇನ್ನು ಜಿಲ್ಲೆಯಲ್ಲಿ ಘಟ್ಟದ ಮೇಲೆ ಹೆಚ್ಚಿನ ಮಳೆಯಾಗುತಿದ್ದು, ಯಲ್ಲಾಪುರ ಹಾಗೂ ಅಂಕೋಲ ತಾಲೂಕಿನಲ್ಲಿ ಹರಿಯುವ ಗಂಗಾವಳಿ ನದಿ ತುಂಬಿ ಹರಿಯುತ್ತಿದೆ. ಅಂಕೋಲ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಪಣಸಗುಳಿ ಸೇತುವೆ ಮೇಲೆ ನೀರು ಹರಿಯುತಿದ್ದರೂ ಲೆಕ್ಕಿಸದೇ ಲಾರಿ ಚಲಾಯಿಸಿದ್ದರಿಂದ ಆರು ಜನರು ನೀರಿನಲ್ಲಿ ಕೊಚ್ಚಿಹೋಗಿದ್ದರು. ಇವರಲ್ಲಿ ಐದು ಜನರನ್ನು ರಕ್ಷಣೆ ಮಾಡಲಾಗಿದೆ. ಆದರೆ ಲಾರಿಯಲ್ಲಿದ್ದ ಸಂದೀಪ್ ನಾಪತ್ತೆಯಾಗಿದ್ದು ಈತನಿಗಾಗಿ ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಇನ್ನು ಗಂಗಾವಳಿ ನದಿಯಲ್ಲಿ ಕೊಚ್ಚಿಹೋದ ಲಾರಿಯನ್ನು ಮೇಲೆತ್ತಿದ್ದಾರೆ.

ಇನ್ನಾದರೂ ಸೇತುವೆ ನಿರ್ಮಿಸಿಕೊಡಿ.!
ಸದ್ಯ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು ಗಂಗಾವಳಿ ಭಾಗದ ಪಣಸಗುಳಿ, ಕೈಗಡಿ, ಡೋಂಗ್ರಿ ಭಾಗದ ಜನರಿಗೆ ಸಂಚರಿಸಲು ಜಿಲ್ಲಾಡಳಿತ ದೋಣಿ ವ್ಯವಸ್ಥೆ ಕಲ್ಪಿಸಿದೆ. ಆದರೇ ಶೀಘ್ರದಲ್ಲಿ ಶಾಶ್ವತ ಸೇತುವೆ ನಿರ್ಮಾಣವಾದರೆ ದೊಡ್ಡ ಸಮಸ್ಯೆ ಪರಿಹಾರವಾಗಲಿದೆ. ಅಲ್ಲದೇ ಜನರು ಉಕ್ಕಿ ಹರಿಯುವ ಈ ಸೇತುವೆಯ ಮೇಲೆ ತೆರಳಿ ಪ್ರಾಣ ಕಳೆದುಕೊಳ್ಳುವ ಭೀತಿಯೂ ತಪ್ಪಲಿದೆ.



