ನಗರಸಭೆಯ ಅನುಮತಿ ಇಲ್ಲದೇ ಗೂಡಂಗಡಿ ನಿರ್ಮಾಣ: ಸಿಬ್ಬಂದಿಗಳಿಂದ ತೆರವು

ದಾಂಡೇಲಿ: ಪಟ್ಟಣದ ಗಣೇಶ ನಗರದ ನಗರಸಭೆ ಜಾಗದಲ್ಲಿ ಅನುಮತಿ ಇಲ್ಲದೆ ಹಾಕಿದ್ದ ಗೂಡಂಗಡಿಯನ್ನು ನಗರಸಭೆ ಸಿಬ್ಬಂದಿ ಗುರುವಾರ ತೆರವುಗೊಳಿಸಿದರು.

ಗಣೇಶ ನಗರದ ಆಟೋ ರಿಕ್ಷಾ ಸ್ಯಾಂಡ್ ಪಕ್ಕದಲ್ಲಿ ರಸ್ತೆಗೆ ಹೊಂದಿರುವ ನಗರಸಭೆ ಖಾಲಿ ಜಾಗದಲ್ಲಿ ಗೂಡಂಗಡಿ ಇಡಲು ತಯಾರಿ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ನಗರಸಭೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಅಂಗಡಿ ಹಾಕುತ್ತಿರುವವರನ್ನು ವಿಚಾರಿಸಿದಾಗ ನಗರಸಭೆಯಿಂದ ಯಾವುದೇ ರೀತಿಯ ಅನುಮತಿ ಪಡೆಯದಿರುವುದು ಕಂಡು ಬಂದಿದೆ. ನಗರದ ಖಾಲಿ ಜಾಗದಲ್ಲಿ ಮನೆ, ಅಂಗಡಿ ಹಾಕುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ನಗರಸಭೆ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ನೀಡಿದರು ರಾತ್ರೋ ರಾತ್ರಿ ಅಂಗಡಿ, ಮನೆ ಮುಂದಿನ ಭಾಗ ವಿಸ್ತರಣೆ ಮಾಡುತ್ತಿದ್ದಾರೆ.