ಭಟ್ಕಳ: ಇಲ್ಲಿನ ಅಲ್ಪಸಂಖ್ಯಾತ ಇಲಾಖೆಯ ವಿಸ್ತೀರ್ಣಾಧಿಕಾರಿ ಕಾರ್ಯಲಯವು ಭಟ್ಕಳದ ಅಲ್ಪಸಂಖ್ಯಾತ ಶಾಲೆಗಳು ಮುಖ್ಯಾದ್ಯಾಪಕರಿಗೆ, ವಿದ್ಯಾರ್ಥಿವೇತನ ನೋಡೆಲ್ ಅಧಿಕಾರಿಗಳಿಗಾಗಿ ತರಬೇತಿ ಮತ್ತು ಮಾಹಿತಿ ಕಾರ್ಯಗಾರವನ್ನು ನಗರದ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿತ್ತು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಇಲಾಖೆಯ ತಾಲೂಕು ವಿಸ್ತೀರ್ಣಾಧಿಕಾರಿ ಶಮ್ಸುದ್ದೀನ್ ಮಾತನಾಡಿ, ಭಟ್ಕಳ ತಾಲೂಕಿನಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಎಲ್ಲರಿಗೂ ವಿದ್ಯಾರ್ಥಿವೇತನ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಶಾಲೆಯ ಮುಖ್ಯಸ್ಥರು ಪ್ರತಿಯೊಬ್ಬ ಪಾಲಕರಿಗೆ ವಿದ್ಯಾರ್ಥಿ ವೇತನ ಕುರಿತಂತೆ ಮಾಹಿತಿ ನೀಡಿ ಎನ್.ಎಸ್.ಪಿ.(ನ್ಯಾಶನಲ್ ಸ್ಕಾಲರ್‌ಶಿಪ್ ಪೋರ್ಟಲ್) ಯಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಇಲಾಖೆಯು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಪ್ರತಿಯೊಂದು ಹಂತದಲ್ಲಿ ತರಬೇತಿ ಮತ್ತು ಮಾಹಿತಿಯನ್ನು ನೀಡಲಾಗುತ್ತಿದೆ. ಶಾಲೆ ಮತ್ತು ಸಾರ್ವಜನಿಕರ ಸಹಭಾಗಿತ್ವದಲ್ಲಿ ತಾಲೂಕಿನ ಎಲ್ಲ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಮಾತನಾಡಿ, ವಿದ್ಯಾರ್ಥಿವೇತನ ಪೋರ್ಟಲ್ ನಲ್ಲಿ ಕೆಲವೊಂದು ಸಮಸ್ಯೆಗಳಿದ್ದು ಅದನ್ನು ಪರಿಹರಿಸಬೇಕು, ಭಟ್ಕಳ ತಾಲೂಕಿನಲ್ಲಿ ಶಮ್ಸುದ್ದೀನ್ ರವರ ಪ್ರಯತ್ನದೊಂದಿಗೆ ವಿದ್ಯಾರ್ಥಿ ವೇತನ ನೋಂದಾಣಿಯಲ್ಲಿ ಪ್ರಗತಿ ಸಾಧಿಸಲಾಗಿದ್ದು, ಅವರು ಹಲವು ಯೋಜನೆಗಳನ್ನು ಭಟ್ಕಳಕ್ಕೆ ತಂದಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ಆಹಮದ್ ದಫೇದಾರ್, ಅಲ್ಪಸಂಖ್ಯಾತ ವಿದ್ಯಾರ್ಥಿನಿಲಯದ ವಾರ್ಡನ್ ನಾಗೇಂದ್ರ, ನ್ಯಾಶನಲ್ ಕಾಲೋನಿ ಸಿ.ಆರ್.ಪಿ. ನಾಝಿಯಾ ಮತ್ತಿತರರು ಉಪಸ್ಥಿತರಿದ್ದರು.