ಮನೆಗೇ ಬಂದ ಆಧಾರ್ ಸೆಂಟರ್.! ಹಾಸಿಗೆ ಹಿಡಿದ ಅಜ್ಜಿಗೆ ಮನೆಯಲ್ಲೇ ಆಧಾರ್ ಕಾರ್ಡ್ ರೆಡಿ.!

ಧಾರವಾಡ: ಜಿಲ್ಲೆಯ ಹೆಬ್ಬಳ್ಳಿ ಗ್ರಾಮದ 50 ವರ್ಷದ ಹಾಲವ್ವ ಹುರಿಗೋಳ ಕಳೆದ 17 ವರ್ಷಗಳಿಂದ ದೀರ್ಘಕಾಲ‌ ಹಾಸಿಗೆ ಹಿಡಿದಿದ್ದಾರೆ. ಎದ್ದು ಓಡಾಡುವ ಪರಿಸ್ಥಿತಿ ಇಲ್ಲದ್ದರಿಂದ ಸರ್ಕಾರದ ಸೌಲಭ್ಯ ಪಡೆಯಲು ಬೇಕಾದ ಯಾವ ದಾಖಲೆಗಳು ಆಕೆಯ ಬಳಿ ಇಲ್ಲ. ಆಧಾರ ಕಾರ್ಡ್ ಪಡೆಯಬೇಕೆಂದರೆ ಸೆಂಟರ್‌ಗೆ ಹೋಗುವ ಸ್ಥಿತಿಯಲ್ಲೂ ಇಲ್ಲ. ಥಂಬ್ ಪಡೆಯದೇ ಆಧಾರ‌ ಕಾರ್ಡ್ ಪಡೆಯಲು ಸಾಧ್ಯವಿಲ್ಲ. ಆಧಾರ ಕಾರ್ಡ್ ಇಲ್ಲದೇ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲಾಗದ ಪರಿಸ್ಥಿತಿ ಅಜ್ಜಿಯದಾಗಿದೆ.

ಸುಮಾರು ಎರಡು ತಿಂಗಳ ಹಿಂದೆ ಧಾರವಾಡದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ನಡೆಸುವ ಪ್ಯಾಲಿಯೇಟಿವ್ ಕೇರ್ ತಂಡದ ಗಮನಕ್ಕೆ ಬಂದ ಬಳಿಕ ನಿರಂತರವಾಗಿ ಮನೆ ಆಧಾರಿತ ಚಿಕಿತ್ಸೆ ನೀಡಲಾಗುತ್ತಿತ್ತು. ಹೇಗಾದರೂ ಮಾಡಿ ಆ ಅಜ್ಜಿಗೆ ಆಧಾರ ಕಾರ್ಡ್ ಮಾಡಿಕೊಡಬೇಕೆಂದು ಪಣ ತೊಟ್ಟಿದ್ದ ಪ್ಯಾಲಿಯೇಟಿವ್ ಕೇರ್ ತಂಡ ಕೊನೆಗೂ ಯಶಸ್ವಿಯಾಗಿದೆ.

ಧಾರವಾಡದ ಆಧಾರ ಕಾರ್ಡ್ ಸೆಂಟರ್ ಒಂದನ್ನು ಸಂಪರ್ಕಿಸಿ, ಅಜ್ಜಿಯ ಪರಿಸ್ಥಿತಿ ವಿವರಿಸಿದ ತಂಡ 20 ಕಿಲೋಮೀಟರ್ ದೂರದ ಹೆಬ್ಬಳ್ಳಿಯ ಅಜ್ಜಿಯ ಮನೆಗೆ ಆಧಾರ ಸೆಂಟರನ್ನೇ ಒಯ್ದು ಆಧಾರ ಕಾರ್ಡ್ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಆಧಾರ ಕಾರ್ಡ್ ಸೆಂಟರಿನ ಸಿಬ್ಬಂದಿ ಲ್ಯಾಪಟಾಪ್, ಡೆಸ್ಕ್ ಟಾಪ್, ಸ್ಕ್ಯಾನರ್ ಮುಂತಾದವುಗಳನ್ನು ಒಯ್ದು ಮನೆಯಲ್ಲಿಯೇ ಥಂಬ್ ಇಂಪ್ರೆಷನ್ ಪಡೆದು ಯಶಸ್ವಿಯಾಗಿ ಆಧಾರ ಕಾರ್ಡ್ ರಿಜಿಸ್ಟರ್ ಮಾಡಿದ್ದಾರೆ.

ಒಬ್ಬ ಹಾಸಿಗೆ ಹಿಡಿದ ಅಜ್ಜಿಯ ಮನೆಗೆ ಬಂದು ಆಧಾರ ಕಾರ್ಡ್ ನೀಡಿರುವುದು ನಮ್ಮ ಜೀವನಕ್ಕೊಂದು ಸಾರ್ಥಕತೆ ಎನಿಸಿದೆ ಎಂದು ಯೂತ್ ಮೂವ್ ಮೆಂಟ್ ಮುಖ್ಯಸ್ಥ ಕೆ.ಎಸ್. ಜಯಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಛಲ ಬಿಡದ ವಿಕ್ರಮನಂತೆ ಬೆನ್ನು ಹತ್ತಿ ಯಶಸ್ವಿಯಾದ ನಮ್ಮ ಪ್ಯಾಲಿಯೇಟಿವ್ ಕೇರ್ ತಂಡಕ್ಕೆ ಅಭಿನಂದನೆಗಳು ಎಂದು ಅವರು ಹೇಳಿದ್ದಾರೆ.