ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾದ ಪಂ ಮಧೂಪ್ ಮುದ್ಗಲ್

ಧಾರವಾಡ: ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ದಿಲ್ಲಿಯ ಹಿರಿಯ ಗಾಯಕ ಪದ್ಮಶ್ರೀ ಪುರಸ್ಕೃತ ಪಂ ಮಧೂಪ್ ಮುದ್ಗಲ್  ಭಾಜನರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ನಿಂದ ಕೊಡಮಾಡುವ ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿದೆ. ಪದ್ಮಭೂಷಣ ಪಂ.ಬಸವರಾಜ ರಾಜಗುರು ಅವರ 102 ನೇ ಜನ್ಮ ದಿನಾಚರಣೆ ಅಂಗವಾಗಿ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2022-23 ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಪ್ರಾಚೀನ ಕಾಲದಿಂದಲೂ ಕರ್ನಾಟಕ ಸಂಸ್ಕೃತಿ ಯು ಸಂಗೀತ ಕ್ಷೇತ್ರಕ್ಕೆ  ಅಪಾರ  ಕೊಡುಗೆ ನೀಡಿದೆ. ಗುರುಶಿಷ್ಯರ ಶ್ರೇಷ್ಠ ಪರಂಪರೆ ಇಲ್ಲಿದೆ. ಸ್ವರ ಸಾಮ್ರಾಟ ಪಂ.ಬಸವರಾಜ ರಾಜಗುರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು. ಸಂಗೀತವನ್ನು ಸಕಲ ಜೀವಿರಾಶಿಗಳು ಆಸ್ವಾದಿಸುತ್ತವೆ. ಮಾನವನ ಮಾನಸಿಕ ಒತ್ತಡಗಳಿಗೆ ಸಂಗೀತ ದಿವ್ಯ ಔಷಧವಾಗಿದೆ ಎಂದರು.

ಸ್ವರಸಾಮ್ರಾಟ ಪಂ.ಬಸವರಾಜ  ರಾಜಗುರು  ರಾಷ್ಟ್ರೀಯ ಪ್ರಶಸ್ತಿಯನ್ನು ಪದ್ಮಶ್ರೀ ಪಂ.ಮಧೂಪ್ ಮುದ್ಗಲ್ ಅವರಿಗೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ರಾಷ್ಟ್ರೀಯ ಸಂಗೀತ ಯುವ ಪ್ರಶಸ್ತಿಗೆ ಭಾಜನರಾದ ಸತೀಶ ಕೊಳ್ಳಿ, ಪುಣೆಯ ಕುಮಾರ ವಿರಾಜ್ ಜೋಷಿ ಅವರಿಗೆ ತಲಾ 25 ಸಾವಿರ ರೂ. ಗಳ ನಗದು  ಬಹುಮಾನ ಹಾಗೂ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಭಾರತಿದೇವಿ ರಾಜಗುರು, ನಿಜಗುಣ ರಾಜಗುರು, ಸಂಗೀತಾ ಕಟ್ಟಿ, ಪಂ.ರಘುನಾಥ ನಾಕೋಡ್, ಪಂ.ಕೈವಲ್ಯಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ಕುಮಾರ ಬೆಕ್ಕೇರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.