ಮುಂಡಗೋಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿದ್ದ ವಿ.ಎಸ್.ಪಾಟೀಲ ಅವರನ್ನು ಅಧ್ಯಕ್ಷ ಸ್ಥಾನದಿಂದ ರದ್ದು ಪಡಿಸಿದ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದರ ಕುರಿತು ನಮ್ಮ ಪ್ರತಿನಿಧಿ ಅವರೊಂದಿಗೆ ನಡೆಸಿದ ಕಿರು ಸಂದರ್ಶನ ಇಲ್ಲಿದೆ.
ಪ್ರಶ್ನೆ: ವಾಕರಸಾ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ಏಕಾಏಕಿ ರದ್ದುಗೊಳಿಸಲು ಕಾರಣ ಏನು.?
ವಿ.ಎಸ್.ಪಾಟೀಲ: ಪಕ್ಷದ ಸಿದ್ಧಾಂತಗಳು ಬಹಳ ಇವೆ. ಸಾಕಷ್ಟು ಹೋರಾಟ ಮಾಡಿ ಅಧಿಕಾರ ತಂದ ಯಡಿಯೂರಪ್ಪನವರನ್ನೂ ವಯಸ್ಸಿನ ನಿರ್ಬಂಧನೆಯಿಂದ ಕೆಳಗೆ ಇಳಿಸಿದರು. ಹೊರಟ್ಟಿಯವರನ್ನು 77 ವರ್ಷವಾದರೂ ಕರೆದು ಟಿಕೆಟ್ ಕೊಟ್ಟರು. ನಮ್ಮದೂ ಯಾವುದಾದರೊಂದು ಕಾರಣ ಇರಬಹುದು. ಬಿಜೆಪಿಯಲ್ಲಿ ನಮಗೆ ಟಿಕೆಟ್ ಸಿಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಊಹಾಪೋಹಗಳಿದ್ದ ಕಾರಣ ವಾಕರಸಾ ಸಂಸ್ಥೆ ಅಧ್ಯಕ್ಷ ಸ್ಥಾನದಿಂದ ಇಳಿಸಲಾಗಿದೆ
ಪ್ರಶ್ನೆ: ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಊಹಾಪೋಹ ನಿಜವೇ.?
ವಿ.ಎಸ್.ಪಾಟೀಲ: ಸ್ಥಳೀಯ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಬರಲು ಒತ್ತಾಯ ಮಾಡಿರುವುದು ಎಲ್ಲರಿಗೆ ಗೊತ್ತಿರುವ ವಿಷಯ. ಚರ್ಚೆಯೂ ನಡೆದಿತ್ತು. ಈ ಬಗ್ಗೆ ನಿರ್ಧಾರ ಮಾಡಿ ರಾಜೀನಾಮೆ ನೀಡುವುದಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನಾನು ಹೇಳಿದ್ದೆ. ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಪಕ್ಷದಲ್ಲಿ ಬಹಳ ವರ್ಷದಿಂದ ದುಡಿದವರಿಗೆ ಅನುಕೂಲವಾಗುತ್ತದೆ.
ಪ್ರಶ್ನೆ: ಕಾಂಗ್ರೆಸ್ ಪಕ್ಷದ ಸೇರ್ಪಡೆ ಬಗ್ಗೆ ಅಧಿಕೃತವಾಗಿ ಯಾವಾಗ ಘೋಷಣೆ ಮಾಡುವಿರಿ.?
ವಿ.ಎಸ್.ಪಾಟೀಲ: ರಾಜ್ಯಾಧ್ಯಕ್ಷರಿಗೆ ಭೇಟಿಯಾಗಿ ಮಾತನಾಡಿ ಘೋಷಣೆ ಮಾಡುತ್ತೇನೆ.
ಪ್ರಶ್ನೆ: ಪಕ್ಷದಲ್ಲಿ ಸಮರ್ಥ ಅಭ್ಯರ್ಥಿ ನೀವೇ ಎಂದು ಹೇಳಲಾಗುತ್ತಿದೆ.?
ವಿ.ಎಸ್.ಪಾಟೀಲ: ಯಾವ ಷರತ್ತೂ ಇಲ್ಲದೇ ಸೇರುತ್ತಿದ್ದೇನೆ. ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್‌ನವರು ನಿರ್ಧಾರ ಮಾಡುತ್ತಾರೆ.
ಪ್ರಶ್ನೆ: ಕಳೆದ ಬಾರಿ ಚುನಾವಣೆ ವೇಳೆಯಲ್ಲಿ ಮುಂದಿನ ಬಾರಿ ನಿಮಗೇ ಟಿಕೆಟ್ ಕೊಡುವುದಾಗಿ ಒಪ್ಪಂದ ಆಗಿತ್ತು ಎಂದು ಕೇಳಿ ಬಂದಿತ್ತು.?
ವಿ.ಎಸ್.ಪಾಟೀಲ: ಆದರೆ ಈಗ ಆ ಪರಿಸ್ಥಿತಿ ಇಲ್ಲ. ಸದ್ಯಕ್ಕೆ ಬಿಜೆಪಿಯಲ್ಲಿಯೇ ಇದ್ದೇನೆ. ನಿಗಮ ಕೈ ತಪ್ಪಿ ಹೋದರೆ ನಾನೇನೂ ಕಾಂಗ್ರೆಸ್ ಪಕ್ಷದವನಲ್ಲ. ಅಲ್ಲಿ ಮಾತುಕತೆಯಾಗಿ ಕಾರ್ಯಕರ್ತರ ಅಭಿಪ್ರಾಯ ತಿಳಿದುಕೊಂಡು ಹೊಂದಾಣಿಕೆ ಆದರೆ ಕಾಂಗ್ರೆಸ್ ಪಕ್ಷ ಸೇರುತ್ತೇನೆ.