ಕುಮಟಾ: ಶಾಸಕ ದಿನಕರ ಶೆಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಭೇಟಿಯಾಗಿ ಕ್ಷೇತ್ರದ ಅಭಿವೃದ್ಧಿಯ ಕುರಿತು ಹಾಗೂ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಮುಖ್ಯವಾಗಿ ನಮ್ಮ ಜಿಲ್ಲೆಯಲ್ಲಿ ಮಲ್ಟಿಸ್ಪೆಷಲಿಟಿ ಆಸ್ಪತ್ರೆಯನ್ನು ನಿರ್ಮಿಸಲು ಜಿಲ್ಲೆಯ ಮಧ್ಯವರ್ತಿ ಸ್ಥಳವಾಗಿರುವ ಕುಮಟಾ ತಾಲೂಕನ್ನೇ ಆಯ್ಕೆಮಾಡಿಕೊಳ್ಳುವಂತೆ ಮನವಿ ಮಾಡಿದರು. ಕುಮಟಾ ತಾಲೂಕಿನಲ್ಲಿ ಆಸ್ಪತ್ರೆ ನಿರ್ಮಾಣವಾಗುವುದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳ ಜನರಿಗೆ ಆಗುವ ಅನುಕೂಲಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದರು. ಶಾಸಕರ ಈ ಬೇಡಿಕೆಗೆ ಮಾನ್ಯ ಮುಖ್ಯಮಂತ್ರಿಗಳು ಸಕಾರಾತ್ಮವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಇನ್ನು ಅತಿವೃಷ್ಟಿಯಿಂದ ಕುಮಟಾ-ಹೊನ್ನಾವರ ಭಾಗದಲ್ಲಿ ಸಂಭವಿಸಿರುವ ಹಾನಿಯ ಪರಿಹಾರಕ್ಕಾಗಿ ಸೂಕ್ತ ಅನುದಾನವನ್ನು ಶೀಘ್ರವೇ ಒದಗಿಸುವಂತೆ ಬೊಮ್ಮಾಯಿಯವರಲ್ಲಿ ಕೋರಿದರು. ಹಾಗೂ ಕುಮಟಾ ಪುರಸಭೆ ಹಾಗೂ ಹೊನ್ನಾವರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹಾನಿಗೊಳಗಾಗಿರುವ ರಸ್ತೆಗಳ ದುರಸ್ಥಿಯ ಸಲುವಾಗಿ NDRF ಗೆ ನೀಡಿರುವ ಬೇಡಿಕೆಗೆ ಕೂಡಲೇ ಅನುಮೋದನೆ ದೊರಕಿಸಿ ಕೊಡುವಂತೆ ಮನವಿ ಸಲ್ಲಿಸಿದರು.
ಕ್ಷೇತ್ರದ ಸಮಸ್ಯೆಗಳ ಪರಿಶೀಲನೆಗಾಗಿ ಹಾಗೂ ಕೆಲವು ಅಭಿವೃದ್ಧಿ ಕಾಮಗರಿಗಳ ಶಂಕು ಸ್ಥಾಪನೆ ಹಾಗೂ ಉದ್ಘಾಟನೆಗಾಗಿ ಕುಮಟಾ-ಹೊನ್ನಾವರಕ್ಕೆ ಆಗಮಿಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಈ ಸಂದರ್ಭದಲ್ಲಿ ಆಮಂತ್ರಿಸಿದರು.