ಕಾರವಾರ: ಗಣೇಶ ಹಬ್ಬದ ರಜೆಯ ಪ್ರಯುಕ್ತ ಆಗಸ್ಟ್ 27 ರಂದು ನಾಲ್ಕನೇ ಶನಿವಾರ, ಭಾನುವಾರ, ಸ್ವರ್ಣ ಗೌರಿ ಹಾಗೂ ಗಣೇಶ ಚತುರ್ಥಿ ಇರುವುದರಿಂದ 4 ದಿನಗಳ ರಜೆ ಇರುವುದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಗಳನ್ನು ನಿಯೋಜಿಸಿದೆ.
ಆ. 26 ಮತ್ತು 27 ರಂದು ಪುಣೆ/ಮಹಾರಾಷ್ಟ್ರ, ಬೆಂಗಳೂರು ಹಾಗೂ ರಾಜ್ಯದ ಮತ್ತು ಅಂತರ್ರಾಜ್ಯದ ವಿವಿಧ ಪ್ರದೇಶಗಳಿಂದ ಹೆಚ್ಚಿನ ಪ್ರಯಾಣಿಕರು ಹಬ್ಬಕ್ಕಾಗಿ ಸ್ವಂತ ಊರುಗಳಿಗೆ ತೆರಳುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಗಣೇಶ ಹಬ್ಬದ ಅವಧಿಯಲ್ಲಿ 500 ವಿಶೇಷ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.
ಜೊತೆಗೆ ಹಬ್ಬ ಮುಗಿಸಿಕೊಂಡು ಸ್ವಂತ ಊರುಗಳಿಂದ ಮರಳಿ ಬೆಂಗಳೂರು, ಮಂಗಳೂರು, ಹೈದ್ರಾಬಾದ್, ಪುಣೆ ಇನ್ನಿತರೆ ಪ್ರಮುಖ ಸ್ಥಳಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಆ. 31 ಮತ್ತು ಸೆ. 01 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲಾ ವಿಭಾಗಗಳ ಪ್ರಮುಖ ಬಸ್ ನಿಲ್ದಾಣಗಳಿಂದ ವಿಶೇಷ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.
ಈ ಕುರಿತು ಪ್ರಯಾಣಿಕರು ಮುಂಗಡ ಟಿಕೇಟ್ಗಳನ್ನು www.ksrtc.in ವೆಬ್ಸೈಟ್ನಲ್ಲಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಸಾರ್ವಜನಿಕ ಪ್ರಯಾಣಿಕರು ಸದರಿ ವಿಶೇಷ ಹೆಚ್ಚುವರಿ ಸಾರಿಗೆಗಳ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.