ಹೊನ್ನಾವರ: ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯ ಕೊರತೆಯಿಂದ ಸಮಸ್ಯೆಗಳು ಬಗೆಹರಿಯುತ್ತಿಲ್ಲ ಎಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್ ಹೇಳಿದರು. ತಾಲೂಕಿನ ಕರ್ಕಿ ಗ್ರಾಮದ ಜ್ಞಾನೇಶ್ವರಿ ಸಭಾಭವನದಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗಕ್ಕೆ ತೆರಳಿ ಅಲ್ಲಿಯ ಸಮಸ್ಯೆ ಅರಿತು, ಸ್ಥಳದಲ್ಲೆ ಸಮಸ್ಯೆ ಬಗೆಹರಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸಭೆಯ ಮೂಲಕವಾದರು ಎಲ್ಲಾ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಮಸ್ಯೆ ಬಗೆಹರಿಯಲಿದೆ ಎನ್ನುವ ವಿಶ್ವಾಸವಿದೆ.ಪ್ರತಿ ಗ್ರಾಮದಲ್ಲಿ ಗ್ರಾಮ ಒನ್ ತೆರೆದಿದ್ದು, ಸರ್ಕಾರಿ ಯೋಜನೆಯ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು ಎಂದರು.
ಐ ಆರ್ ಬಿ ರಸ್ತೆ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಸಾಲು ಸಾಲು ಸಮಸ್ಯೆ ತೆರೆದಿಟ್ಟರು. ರಸ್ತೆಯ ಅಕ್ಕಪಕ್ಕದ ಗಟಾರ ಸಮಸ್ಯೆ ಜೊತೆಗೆ, ದಾರಿದೀಪ ಹಾಗೂ ಬಸ್ ನಿಲ್ದಾಣ ನಿರ್ಮಾಣ ಆಗದೇ ಇರುವುದು, ಅಪಘಾತ ತಡೆಯಲು ಬ್ಯಾರಿಗೇಟ್ ಅಳವಡಿಸುವಂತೆ ಗ್ರಾ.ಪಂ. ಸದಸ್ಯ ಶ್ರೀಕಾಂತ ಮೊಗೇರ ಸಮಸ್ಯೆ ಬಗ್ಗೆ ಹೇಳುತ್ತಿದ್ದಂತೆ ಇತರೆ ಸದಸ್ಯರು ಹಾಗೂ ಸಾರ್ವಜನಿಕರು ಧ್ವನಿಗೂಡಿಸಿದರು. ಸ್ಥಳಿಯ ವಾಹನಗಳಿಗೆ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದಾಗ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು ಯಾವುದೇ ಕಾರಣಕ್ಕೂ ಟೋಲ್ ವಸೂಲಿ ಮಾಡಬಾರದು ಎಂದು ಆದೇಶ ನೀಡಿದರು.
ತಹಶೀಲ್ದಾರ ನಾಗರಾಜ ನಾಯ್ಕಡ್, ಕರ್ಕಿ ಗ್ರಾ.ಪಂ ಅಧ್ಯಕ್ಷೆ ಕಲ್ಪನಾ ಪ್ಲೋರಾ, ಉಪಾಧ್ಯಕ್ಷೆ ಪೂರ್ಣಿಮಾ ಹೆಗಡೆ, ಇ.ಓ.ಸುರೇಶ ನಾಯ್ಕ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.