ಗೋಕರ್ಣ: ಮನೆ ಮನೆಯಲ್ಲಿ ರಾಮ, ಮನೆ ಮನೆಯಲ್ಲಿ ಸೀತೆ ಉದಯಿಸಬೇಕು ಎನ್ನುವುದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಶಯ ಎಂದು ಎಂದು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಬುಧವಾರ ನಡೆದ ಒಂಬತ್ತನೇ ದಾನ- ಮಾನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಘರ್ ಘರ್ ರಾಮ. ಘರ್ ಘರ್ ಸೀತಾ ಎನ್ನುವುದು ವಿಶ್ವವಿದ್ಯಾ ಪೀಠದ ಧ್ಯೇಯ. ವಿವಿಯ ಬೆಳಕಿನ ಪ್ರಭೆ ದೇಶವನ್ನೆಲ್ಲ ಪಸರಿಸಲಿ. ನಮ್ಮ ಸನಾತನ ಶಿಕ್ಷಣದ ಫಲ ದೇಶಕ್ಕೆ, ವಿಶ್ವಕ್ಕೆ ದೊರೆಯಲಿ ಎಂದು ಆಶಿಸಿದರು.
ಮುಂದೊಂದು ದಿನ ವಿಶ್ವವಿದ್ಯಾಪೀಠ ವಿಶ್ವದ ಬೆಳಕಾದರೆ, ಮತ್ತೊಬ್ಬ ಚಾಣಕ್ಯ ಇಲ್ಲಿ ರೂಪುಗೊಂಡರೆ ಅದರಲ್ಲಿ ನಿಮ್ಮ ಪಾತ್ರವೂ ಇರುತ್ತದೆ. ಅದರ ಮಹಾಫಲ ನಿಮಗೂ ಸಲ್ಲುತ್ತದೆ. ಎಲ್ಲರಿಗೂ ಇಂಥ ಅವಕಾಶ ಇರುವುದಿಲ್ಲ. ಎಷ್ಟೋ ಮಂದಿಗೆ ಶಕ್ತಿ ಇರುತ್ತದೆ. ಆದರೆ ಮನಸ್ಸು ಇರುವುದಿಲ್ಲ. ಮತ್ತೆ ಕೆಲವರಿಗೆ ಮನಸ್ಸಿದ್ದರೂ ಶಕ್ತಿ ಇರುವುದಿಲ್ಲ. ಈ ಎರಡೂ ಯೋಗ ಇರುವವರೇ ಪುಣ್ಯವಂತರು. ಅಂಥ ಸೇವಾ ಅವಕಾಶವನ್ನು ದೇವರು ನಿಮಗೆ ಕಲ್ಪಿಸಿದ್ದಾನೆ ಎಂದು ಹೇಳಿದರು.
ಸಹಸ್ರ ವರ್ಷಗಳ ಹಿಂದೆ ಶಂಕರರೇ ಮಾಡಿದ ಸಂಕಲ್ಪ ಇದೀಗ ಕೈಗೂಡುತ್ತಿದೆ. ದೇಶಕ್ಕೆ, ವಿಶ್ವಕ್ಕೆ ಬೇಕಾದ ಒಂದು ಕಾರ್ಯ ನಡೆಯುತ್ತಿರುವಾಗ ನಿಮ್ಮ ಮನ, ಧನ ಅಲ್ಲಿಗೆ ಸೇರಿದೆ. ದಾನದ ಸಮರ್ಪಣೆ, ಸೇವೆಯ ಮೂಲಕ ನಿಮ್ಮ ಮನ ಹಾಗೂ ಧನ ಪವಿತ್ರವಾಗಿದೆ. ರಥೋತ್ಸವ ನಡೆಸುವ ಚೈತನ್ಯ ನಮ್ಮಲ್ಲಿಲ್ಲದಿದ್ದರೂ, ನಡೆಯುವ ರಥೋತ್ಸವದಲ್ಲಿ ನಾವು ಕೂಡಾ ರಥದ ಹಗ್ಗ ಎಳೆಯುವ ಪ್ರಯತ್ನ ಮಾಡಬೇಕು. ನಮ್ಮ ಶಕ್ತಿಯಿಂದ ರಥ ಮುಂದಕ್ಕೆ ಬರುವುದಿಲ್ಲ. ಸಾವಿರಾರು ಕೈಗಳ ಶಕ್ತಿ ಅದನ್ನು ಮುನ್ನಡೆಸುವಂತೆ ಮಹತ್ಕಾರ್ಯದಲ್ಲಿ ನಾವೂ ಭಾಗಿಯಾಗಬೇಕು ಎಂದು ಸಲಹೆ ಮಾಡಿದರು.
ರಾಮಸೇತು ನಿರ್ಮಾಣದ ವೇಳೆ ಸಹಸ್ರಾರು ಕಪಿಗಳು ಸಹಕರಿಸಿದಂತೆ, ಮಹತ್ಕಾರ್ಯದಲ್ಲಿ ಸೇರಿದ ನಾವೆಲ್ಲರೂ ಧನ್ಯತೆ ಪಡೆಯುತ್ತೇವೆ. ಸೂರ್ಯ ಸಮುದ್ರದ ನೀರನ್ನು ಪ್ರಖರ ಕಿರಣಗಳ ಮೂಲಕ ಸ್ವೀಕರಿಸಿದಾಗ ಅದು ಮೋಡವಾಗಿ ಮಳೆಯಾಗಿ ಮತ್ತೆ ಭುವಿಗೆ ಸುರಿದು ಸಿಹಿ ನೀರಾಗುತ್ತದೆ. ಹಾಗೆಯೇ ಇದು ಕೂಡಾ. ಒಳಿತು- ಒಳಿತುಗಳ ನಡುವೆ ಸೆಳೆತ ಇರುತ್ತದೆ ಎನ್ನುವುದಕ್ಕೆ ಈ ಮಹತ್ಕಾರ್ಯಕ್ಕೆ ಸಮಾಜದಿಂದ ನೆರವು ಹರಿದು ಬಂದಿರುವುದೇ ಸಾಕ್ಷಿ ಎಂದು ವರ್ಣಿಸಿದರು.
ರಾಮ ರಾಜ್ಯ ನಿರ್ಮಾಣವಾಗಲು, ರಾವಣನ ಸಂಹಾರಕ್ಕೆ ಇಂಥ ಒಳಿತುಗಳ ಸೆಳೆತ ಕಾರಣವಾಗಿತ್ತು. ಒಳಿತುಗಳು ಎಲ್ಲೆಡೆಯಿಂದ ಬಂದು ಸೇರುತ್ತವೆ. ಲಂಕೆಯಿಂದ ವಿಭೂಷಣ ಕೂಡಾ ಬಂದು ರಾಮನ ಕಡೆಗೆ ಸೇರುತ್ತಾನೆ. ಅಂತೆಯೇ ಮಹಾಭಾರತ ಯುದ್ಧಾರಂಭದ ಸಂದರ್ಭದಲ್ಲಿ ಕೌರವ ಸೇನೆಯಿಂದ ಯುಯುತ್ಸು ಕೂಡಾ ಪಾಂಡವರ ಜತೆ ಸೇರಿಕೊಂಡು ಧರ್ಮಯುದ್ಧದ ಪರ ವಹಿಸುತ್ತಾನೆ ಎಂದು ಅಭಿಪ್ರಾಯಪಟ್ಟರು.
ಧಾರ್ಮಿಕ ಕಾರ್ಯಕ್ರಮದಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀ ಪಾರಾಯಣ, ಗಣಪತಿ ಹವನ, ಗೋಕರ್ಣದ ಮೈತ್ರೇಯಿ ಮಹಿಳಾ ಮಂಡಳಿಯಿಂದ ಸಾಮೂಹಿಕ ಲಲಿತಾ ಸಹಸ್ರನಾಮ ಪಠಣ ನಡೆಯಿತು.