ಸಿದ್ದಾಪುರ: 2022 ರ ಕೇಂದ್ರ ಸಾಹಿತ್ಯ ಪ್ರಶಸ್ತಿಗೆ ಸಿದ್ದಾಪುರದ ತಮ್ಮಣ್ಣ ಬೀಗಾರ್ ಆಯ್ಕೆಯಾಗಿದ್ದಾರೆ. ತಮ್ಮಣ್ಣ ಅವರ ‘ಬಾವಲಿ ಗುಹೆ’ ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪ್ರಶಸ್ತಿ ಸಂದಿದೆ. ಕಳೆದ ಮೂರು ದಶಕಗಳಿಂದ ನಾಡಿನ ಸಾಹಿತ್ಯ ಕ್ಷೇತ್ರಕ್ಕೆ ಬೀಗಾರ್ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ.
ನವೆಂಬರ 22, 1959 ರಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದ ‘ತಮ್ಮಣ್ಣ’ ಪ್ರಸ್ತುತ ಸಿದ್ದಾಪುರದಲ್ಲಿ ನೆಲೆಸಿದ್ದಾರೆ. ಸ್ನಾತಕೋತ್ತರ ಪದವೀಧರರಾಗಿದ್ದು, ಶಿಕ್ಷಕರಾಗಿ ಮೂವತ್ತೇಳು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಾಹಿತ್ಯ ರಚನೆ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆ ಮುಂತಾದವುಗಳಲ್ಲಿ ನಿರತರಾಗಿದ್ದಾರೆ.
‘ಗುಬ್ಬಚ್ಚಿ ಗೂಡು’ ‘ಚಿಂವ್ ಚಿಂವ್’ ‘ಜೀಕ್ ಜೀಕ್’ ‘ಪುಟಾಣಿ ಪುಡಿಕೆ’ ‘ಸೊನ್ನೆ ರಾಶಿ ಸೊನ್ನೆ’ ‘ತೆರೆಯಿರಿ ಕಣ್ಣು’ ‘ಖುಷಿಯ ಬೀಜ’ ‘ಹಾಡಿನ ಹಕ್ಕಿ’ ಮುಂತಾದ ಮಕ್ಕಳ ಕವನ ಸಂಕಲನಗಳು, ‘ಕಪ್ಪೆಯ ಪಯಣ’ ‘ಜಿಂಕೆ ಮರಿ’ ‘ಹಸಿರೂರಿನ ಹುಡುಗ,’ ‘ಮಲ್ನಾಡೆ ಮಾತಾಡು’, ‘ಅಮ್ಮನ ಚಿತ್ರ,’ ‘ಪುಟ್ಟನ ಕೋಳಿ’, ‘ಉಲ್ಟಾ ಅಂಗಿ’ ‘ಗಿರಗಿಟ್ಟಿ’ ‘ನಕ್ಷತ್ರ ನೋಡುತ್ತ’ ‘ಪುಟ್ಟಿಯೂ ಹಾರುತ್ತಿದ್ದಳು’ ಮುಂತಾದ ಮಕ್ಕಳ ಕಥಾಸಂಕಲನಗಳು. ‘ಮಾತಾಟ ಮಾತೂಟ’, ‘ಮರಬಿದ್ದಾಗ’, ಎನ್ನುವ ಮಕ್ಕಳಿಗಾಗಿ ಲಲಿತ ಬರಹಗಳು, ‘ಬಾವಲಿ ಗುಹೆ’ ‘ಫ್ರಾಗಿ ಮತ್ತು ಗೆಳೆಯರು’ ಎಂಬ ಮಕ್ಕಳ ಕಾದಂಬರಿಗಳೂ ಸೇರಿ ಇಪ್ಪತ್ತೇಳು ಕೃತಿಗಳನ್ನು ರಚಿಸಿದ್ದಾರೆ.
ಇವರ ಹಸಿರೂರಿನ ಹುಡುಗ ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಹಾಗೂ ಮರಬಿದ್ದಾಗ ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ ಮಕ್ಕಳ ಚಂದ್ರ ಪ್ರಶಸ್ತಿ, ಫ್ರಾಗಿ ಮತ್ತು ಗೆಳೆಯರು ಕೃತಿಗೆ ಪುಸ್ತಕ ಸೊಗಸು ಬಹುಮಾನ ಬಂದಿವೆ. ಇದಲ್ಲದೇ ರಾಜ್ಯ ಉತ್ತಮ ಶಿಕ್ಷಕರ ಪ್ರಶಸ್ತಿ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ, ಪ್ರಜಾವಾಣಿ ಶಿಶುಕಾವ್ಯ ಸ್ಪರ್ಧಾ ಬಹುಮಾನ ಮುಂತಾದವು ದೊರೆತಿವೆ.
ಉತ್ತರ ಕನ್ನಡದ ದಟ್ಟ ಹಸಿರಿನ ಕಾಡು ಪ್ರದೇಶದ ಹಳ್ಳಿಯಿಂದ ಬಂದವನು ನಾನು. ಇಲ್ಲಿನ ಪರಿಸರ ಮತ್ತು ಮಕ್ಕಳ ಪ್ರೀತಿ ನನ್ನ ಮೇಲೆ ಆಳವಾದ ಪ್ರಭಾವ ಬೀರಿವೆ. ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಹಳ್ಳಿಯಲ್ಲಿ ಕೆಲಸಮಾಡುತ್ತ ನಾನು ಮಕ್ಕಳಿಗಾಗಿ ಬರೆಯುತ್ತ ಬಂದಿದ್ದೇನೆ. ಇದನ್ನು ಗುರುತಿಸಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಬಂದಿರುವುದು ಅತ್ಯಂತ ಖುಷಿಯಾಗಿದೆ.
– ತಮ್ಮಣ್ಣ ಬೀಗಾರ್