2 ಎ ಮೀಸಲಾತಿಗಾಗಿ ಸಿಎಂ‌ ನಿವಾಸದ ಮುಂದೆ ಸತ್ಯಾಗ್ರಹ.! – ಬಸವಜಯ ಮೃತ್ಯುಂಜಯ ಸ್ವಾಮೀಜಿ

ಹಾವೇರಿ: ಆಗಸ್ಟ್ 22 ರಂದು ಪಂಚಮಸಾಲಿ ಸಮಾಜಕ್ಕೆ 2 ಎ‌ ಮೀಸಲಾತಿಯನ್ನು ಸಿಎಂ ಘೋಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಹೀಗಾಗಿ ಸಿಎಂಗೆ ಸನ್ಮಾನ ಮಾಡುವ ಉದ್ದೇಶ ಇಟ್ಕೊಂಡಿದ್ದೆವು. ಆದರೆ ಸನ್ಮಾನ ಮಾಡೋ‌ ಸಮಯ ಬರಲಿಲ್ಲ. ಸಪ್ಟೆಂಬರ್ 26 ರಂದು ಸಿಎಂ‌ ನಿವಾಸದ ಮುಂದೆ ಸತ್ಯಾಗ್ರಹ ಮಾಡುತ್ತೇವೆ. ಇನ್ನೇನಿದ್ದರೂ ಅಂತಿಮ ಹೋರಾಟ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಸಮಾಜ ಬಾಂಧವರ ಸಭೆ ನಂತರ ಮಾತನಾಡಿದ ಅವರು ಅಕ್ಟೋಬರ್ 23 ರಂದು ಚೆನ್ನಮ್ಮ ಜಯಂತ್ಯೋತ್ಸವದ ದಿನ ವಿಧಾನಸೌದದ ಮುಂಭಾಗದಲ್ಲಿ ಇಪ್ಪತ್ತೈದು ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡುತ್ತೇವೆ. ಮಲೇಗೌಡ, ಗೌಡ ಲಿಂಗಾಯತ, ಪಂಚಮಸಾಲಿ ಸಮಾಜ ಸೇರಿದಂತೆ ಎಲ್ಲರೂ ಸೇರಿ‌ ಬಹುದೊಡ್ಡ ಹೋರಾಟ. ಇದು ಅಂತಿಮ ಹೋರಾಟ. ಸೆಪ್ಟೆಂಬರ್ 26 ರ‌ ಒಳಗಾಗಿ ಮೀಸಲಾತಿ ಘೋಷಣೆ ಮಾಡಬೇಕು. ಸೆಪ್ಟೆಂಬರ್ 26 ರಂದು ಹೋರಾಟ‌ ಮಾಡಲು ಸರ್ವಾನುಮತದ ನಿರ್ಣಯ‌ ಮಾಡಿದ್ದೇವೆ ಎಂದರು

2023 ರ‌ ಚುನಾವಣೆಯಲ್ಲಿ ಯಾವ ರೀತಿಯ ರಾಜಕೀಯ ನಿರ್ಣಯ ತೆಗೆದುಕೊಳ್ಳಬೇಕು ಅನ್ನೋದನ್ನು ಸಮಾವೇಶದಲ್ಲಿ ಘೋಷಣೆ ಮಾಡುತ್ತೇವೆ. ಜನರ ಆಕ್ರೋಶದ ಸಹನೆಯ ಕಟ್ಟೆ ಒಡೆದು ಹೋಗಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.