ಜಿಲ್ಲಾಧಿಕಾರಿಗಳ ಕಾರ್ಯವೈಖರಿ ವೀಕ್ಷಣೆಗೆ ವಿದ್ಯಾರ್ಥಿನಿಗೆ ಸಿಕ್ತು ಅಪೂರ್ವ ಅವಕಾಶ.!

ಕಲಬುರಗಿ: ವಿಶ್ವ ಕೌಶಲ್ಯ ದಿನಾಚರಣೆ ಪ್ರಯುಕ್ತ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕಳೆದ ಜುಲೈಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅಯೋಜಿಸಿದ ‘ಕೌಶಲ್ಯ ಸ್ಪೂರ್ತಿ’ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕು.ರಕ್ಷಿತಾಗೆ ಕೌಶಲ್ಯಾಭಿವೃದ್ಧಿ ಇಲಾಖೆಯು ಮಂಗಳವಾರ ಡಿಸಿ ಯಶವಂತ ವಿ. ಗುರುಕರ್ ಅವರ ಒಂದು ದಿನದ ಕೆಲಸ ಕಾರ್ಯಗಳ ವೀಕ್ಷಣೆಗೆ ಅಪೂರ್ವ ಅವಕಾಶ ನೀಡಿತು.

ಜಿಲ್ಲಾಧಿಕಾರಿಗಳ ಇಡೀ ದಿನದ ಕಾರ್ಯವೈಖರಿಯನ್ನು ವೀಕ್ಷಿಸಲು ಬೆಳಿಗ್ಗೆ ಡಿಸಿ ಕಚೇರಿಗೆ ಬಂದ ಜೇವರ್ಗಿ ಮೂಲದ ಕಲಬುರಗಿಯ ವಿ.ಜಿ.ಮಹಿಳಾ ಮಹಾವಿದ್ಯಾಲಯದ ಬಿ.ಎಸ್ಸಿ ಎರಡನೇ ಸೆಮಿಸ್ಟರ್ ವಿದ್ಯಾರ್ಥಿನಿ ರಕ್ಷಿತಾ ತಂದೆ ರಾಜಶೇಖರರನ್ನು ಹೂಗುಚ್ಛ ನೀಡಿ ಡಿಸಿ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಡಿಸಿ ಯಶವಂತ ವಿ. ಗುರುಕರ್ ಮಾತನಾಡಿ, ಇಡೀ ದಿನ ನನ್ನೊಂದಿಗೆ ಇದ್ದು, ಸಭೆ ಹಾಗೂ ಕೆಲಸ‌ ಕಾರ್ಯಗಳು ವೀಕ್ಷಿಸಬೇಕು. ಸಾಯಂಕಾಲ‌ 5.30 ಕ್ಕೆ ನನ್ನ ಕಾರಿನಲ್ಲಿಯೇ ಮನೆಗೆ ಕಳುಹಿಸುವೆ ಎಂದು ವಿದ್ಯಾರ್ಥಿನಿಗೆ ಹಾಗೂ ಅವರ ತಂದೆ ಕಾರ್ಪೆಂಟರ್ ರಾಜಶೇಖರ ಅವರಿಗೆ ಹೇಳಿದರು.

ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ಶಿಕ್ಷಣದ ಹೊರತಾಗಿ ನಾವು ಕೌಶಲ್ಯ ಹೇಗೆ ಬೆಳಸಿಕೊಳ್ಳಬೇಕೆಂಬ ವಿಷಯದ ಮೇಲೆ ಆನ್ ಲೈನ್ ಮೂಲಕ ನನ್ನ ಪ್ರಬಂಧ ಮಂಡಿಸಿದ್ದೆ. ಅದಕ್ಕೆ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ‌ ಪಡೆದು ಇಂದು ಡಿಸಿ ಕಾರ್ಯ ವೀಕ್ಷಣೆಗೆ ಅವಕಾಶ ಸಿಕ್ಕಿದ್ದು ಹೆಮ್ಮೆ ಅನಿಸುತ್ತಿದೆ.

– ಕು. ರಕ್ಷಿತಾ, ವಿದ್ಯಾರ್ಥಿನಿ