ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆಗ್ರಹಿಸಿ ಶಾಸಕರಿಗೆ ಮನವಿ ಸಲ್ಲಿಸಿದ ಅಘನಾಶಿನಿ ಗ್ರಾಮಸ್ಥರು

ಕುಮಟಾ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಆಗ್ರಹಿಸಿ ಅಘನಾಶಿನಿ ಭಾಗದ ಗ್ರಾಮಸ್ಥರು ಶಾಸಕ ದಿನಕರ ಶೆಟ್ಟಿಯವರನ್ನು ಭೇಟಿ ಮನವಿ ಸಲ್ಲಿಸಿದರು. ಅಘನಾಶಿನಿ ಮಾಸ್ತಿಕಟ್ಟೆಯಿಂದ ಗೌಡರಕೊಪ್ಪಕ್ಕೆ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಹಾಗೂ ಹಜಾರಾಮ ದೇವಸ್ಥಾನಕ್ಕೆ ಸುಮಾರು 400 ಮೀಟರ್ ಇಂಟರಲಾಕ್ ಹಾಕಿಸಿಕೊಡುವಂತೆ ಶಾಸಕರ ನಿವಾಸಕ್ಕೆ ತೆರಳಿ ಮನವಿ ಮಾಡಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಇಂಟರಲಾಕ್ ಅಳವಡಿಸಿ, ರಸ್ತೆ ನಿರ್ಮಾಣವನ್ನು ಶೀಘ್ರವೇ ಮಾಡಿಕೊಡುವುದಾಗಿ ಭರವಸೆ ನೀಡಿದರು. ಈ ವಾರದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಜನರ ಅಹವಾಲು ಸ್ವೀಕರಿಸುತ್ತೇನೆ ಎಂದು ದಿನಕರ ಶೆಟ್ಟಿ ತಿಳಿಸಿದರು.

ಬಳಿಕ ಮಾತನಾಡಿದ ದಿನಕರ ಶೆಟ್ಟಿ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇನೆ. ಆಯ್ಕೆ ಆದ ದಿನದಿಂದಲೂ ಪ್ರತಿದಿನ ಬೆಳಿಗ್ಗೆ ಗ್ರಾಮೀಣ ಭಾಗದಿಂದ ಬಂದ ಜನರ ಅಹವಾಲು ಸ್ವೀಕರಿಸಿ, ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ನನ್ನನ್ನು ಕುಗ್ಗಿಸಲು ಕೆಲವರು ವ್ಯರ್ಥ ಆರೋಪ ಮಾಡುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ದಿವಾಕರ ನಾಯ್ಕ, ಗುರು ಗೌಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.