ಹಗಲು ಹೊತ್ತಿನಲ್ಲೂ ಚಿರತೆಯ ಓಡಾಟ.! ಗ್ರಾಮಸ್ಥರಲ್ಲಿ ಆತಂಕ.! ಕೂಂಬಿಂಗ್ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ.!

ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಗೌಡ್ತಿಕೊಪ್ಪ ಸುತ್ತಮುತ್ತ ಕಳೆದ ಕೆಲ ದಿನಗಳಿಂದ ಚಿರತೆ ಓಡಾಡುತ್ತಿದ್ದು, ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.

ಹಗಲು ಹೊತ್ತಿನಲ್ಲೂ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರು ಓಡಾಡಲೂ ಭಯಪಡುವಂತಾಗಿದೆ. ಗೌಡ್ತಿಕೊಪ್ಪ, ಮಾವಿನಕಟ್ಟಾ, ಕ್ಯಾದಗಿಸರ, ಭರಣಿ ಮುಂತಾದ ಭಾಗದ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ ಓಡಾಡುವ ರಸ್ತೆಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಮಕ್ಕಳ ಸುರಕ್ಷತೆ ಬಗೆಗೆ ಪಾಲಕರು ಆತಂಕಪಡುವಂತಾಗಿದೆ.

ಚಿರತೆ ಓಡಾಟದ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ಹೇಳಿದರು. ಮಂಚಿಕೇರಿ ಅರಣ್ಯ ವಲಯದ ಅಧಿಕಾರಿಗಳು, ಸಿಬ್ಬಂದಿ ಗ್ರಾಮಸ್ಥರೊಂದಿಗೆ ಸೇರಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಚಿರತೆ ಹೋಗದೇ ಇದ್ದಲ್ಲಿ ಪಂಜರ ಇಟ್ಟು ಕಾರ್ಯಾಚರಣೆ ನಡೆಸಲಾಗುವುದೆಂದು ಅರಣ್ಯ ಇಲಾಖೆಯವರು ಭರವಸೆ ನೀಡಿರುವುದಾಗಿ ಎಂದು ಸ್ಥಳೀಯ ಮುಖಂಡ ನಟರಾಜ ಗೌಡರ್ ಮಾಹಿತಿ ನೀಡಿದ್ದಾರೆ.