ಹತ್ತಿರದ ಶಾಲೆಗಳಿಗೆ ಬೀಗ.! ದೂರದ ಶಾಲೆಯಲ್ಲಿ ಶಿಕ್ಷಕರೇ ಇಲ್ಲ.! ಗಿರಿಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು ತಂದ ಸರ್ಕಾರ.!

ಚಿಕ್ಕಮಗಳೂರು: ಹತ್ತಿರದ ಶಾಲೆ ಮುಚ್ಚಿತು ಎಂದು ಮತ್ತೊಂದು ಶಾಲೆಗೆ ಮಕ್ಕಳನ್ನ ಕಳುಹಿಸಿದರೆ ಆ ಶಾಲೆಗೆ ಬೀಗ ಬಿತ್ತು. ಹೀಗಾಗಿ ಮಕ್ಕಳನ್ನ ಬೇರೆ ಶಾಲೆಗೆ ಕಳಿಸಿದರೆ ಆ ಶಾಲೆಯೂ ಬಂದಾಯ್ತು. ಇನ್ನು ದೂರದ ಶಾಲೆಗೆ ಕಳಿಸಿದರೆ ಆ ಶಾಲೆಯಲ್ಲಿ ಶಿಕ್ಷಕರೇ ಇಲ್ಲ. ಇದು ನಮ್ಮ ಶಿಕ್ಷಣ ಇಲಾಖೆಯ ಪರಿಸ್ಥಿತಿ. ಜಿಲ್ಲೆಯ ಕಳಸ ತಾಲೂಕಿನ ಜಾಂಬಳೆ ಗ್ರಾಮದ ಜನ 15 ದಿನದಲ್ಲಿ ಶಿಕ್ಷಕರ ನೇಮಿಸದಿದ್ದರೆ ಶಾಲೆಗೆ ಬೀಗ ಹಾಕುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ಕಳಸ ತಾಲೂಕಿನ ಕುದುರೆಮುಖ ಸಮೀಪದ ಬಿಳಗಲ್ ಶಾಲೆ ಮುಚ್ಚಿದ ಬಳಿಕ ಅಲ್ಲಿನ ಗಿರಿಜನರು ತಮ್ಮ ಮಕ್ಕಳನ್ನ 5 ಕಿ.ಮೀ. ದೂರದ ಕುದುರೆಮುಖ ಶಾಲೆಗೆ ಕಳುಹಿಸುತ್ತಿದ್ದರು. ಕುದುರೆಮುಖ ಶಾಲೆಯೂ ಮುಚ್ಚಿದ್ದರಿಂದ ಆ ಮಕ್ಕಳನ್ನ 10 ಕಿ.ಮೀ. ದೂರದ ಜಾಂಬಳೆ ಶಾಲೆಗೆ ಸೇರಿಸಿದ್ದರು. ಆದರೆ, ಆ ಶಾಲೆಗೆ ಖಾಯಂ ಶಿಕ್ಷಕರೇ ಇಲ್ಲ. ಮೂವರು ಅತಿಥಿ ಶಿಕ್ಷಕರಿದ್ದು, ಎಲ್ಲಾ ವಿಷಯದ ಪಾಠವನ್ನೂ ಅವರೇ ಮಾಡುತ್ತಿದ್ದಾರೆ. 1 ರಿಂದ 7ನೇ ತರಗತಿವರೆಗೆ 42 ಮಕ್ಕಳಿರೋ ಶಾಲೆಯಲ್ಲಿ ಒಬ್ಬರೂ ಖಾಯಂ ಶಿಕ್ಷಕರಿಲ್ಲ. ಶಾಲೆಯಲ್ಲಿ ಬಿಸಿಯೂಟ ಬಿಟ್ಟರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಪೋಷಕರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕುದುರೆಮುಖ ಸರ್ಕಾರಿ ಶಾಲೆ ಬಾಗಿಲು ಮುಚ್ಚಿದ ಮೇಲೆ ನೆಲ್ಲಿಬೀಡು, ಕೆಂಗನಕೊಂಡ, ಬಿಳಗಲ್ ಸೇರಿದಂತೆ ಹತ್ತಾರು ಹಳ್ಳಿಯ ಬಡ ಮಕ್ಕಳಿಗೆ ಜಾಂಬಳೆ ಶಾಲೆಯೊಂದೇ ಆಸರೆಯಾಗಿತ್ತು. ಆದರೆ, ಈ ಶಾಲೆಯಲ್ಲಿ ಶಿಕ್ಷಕರೇ ಇಲ್ಲದಂತಾಗಿದೆ. ಇನ್ನು ಶಾಲೆಗೆ ಬರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. 2 ವಾರದಲ್ಲಿ ಖಾಯಂ ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರ ನೇಮಕ ಮಾಡದಿದ್ದರೆ ಶಾಲೆಗೆ ಬೀಗ ಹಾಕಿ ಧರಣಿ ಮಾಡುತ್ತೇವೆ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷರು ಹಾಗೂ ಪೋಷಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.