ಶಿರಸಿ:
ಬೇಡ್ತಿ-ವರದಾ ಹಾಗೂ ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ ವಿರೋಧಿಸಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಸಾವಿರಾರು ಜನರು ಸೋಮವಾರ ಶಿರಸಿಯ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಸುಮಾರು 10 ಸಾವಿರಕ್ಕೂ ಅಧಿಕ ಪತ್ರಗಳನ್ನು ಸಲ್ಲಿಸಿದರು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ಜಿಲ್ಲೆಯ ವಿವಿಧ ಸಂಘಟನೆಗಳ ಸಮ್ಮುಖದಲ್ಲಿ ಸೇರಿದ್ದ ಸಾವಿರಾರು ಜನರು ಪತ್ರ ಚಳವಳಿಯಲ್ಲಿ ಭಾಗವಹಿಸಿ, ಪ್ರಸ್ತಾಪಿತ ನದಿ ತಿರುವು, ಶರಾವತಿ ಪಂಪ್ಡ್ ಸ್ಟೋರೆಜ್, ಸಾಗರದ ಅಣು ಸ್ಥಾವರ ವಿರೋಧಿಸಿ, ಪತ್ರ ಚಳವಳಿಯಲ್ಲಿ ಭಾಗವಹಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರವು ಪ್ರಸ್ತಾಪಿಸಿರುವ ಬೇಡ್ತಿ (ಗಂಗಾವಳಿ) ನದಿತಿರುವು ಯೋಜನೆಯನ್ನು ಕೈಬಿಡಬೇಕೆಂದು ಉತ್ತರ ಕನ್ನಡ ಜಿಲ್ಲೆಯ ರೈತರು, ಮೀನುಗಾರರು, ವನವಾಸಿಗಳು ಹಾಗೂ ಎಲ್ಲ ನಾಗರಿಕರ ಪರವಾಗಿ ಈ ಮನವಿ ಮಾಡುತ್ತಿದ್ದೇವೆ. ಈಗಾಗಲೇ ವಿವಿಧ ಪ್ರಾಜ್ಞರು ಅಭಿಪ್ರಾಯ ನೀಡಿರುವಂತೆ, ನಮ್ಮ ಪ್ರದೇಶದ ಪಟ್ಟಣದಹೊಳೆ, ಶಾಲ್ಮಲಾ ನದಿ ಮತ್ತು ಅವು ಮುಂದೆಹೋಗಿ ಸೇರುವ ಬೇಡ್ತಿ ನದಿಯು (ಗಂಗಾವಳಿ) ಪಶ್ಚಿಮಘಟ್ಟದ ಸೂಕ್ಷ್ಮಪರಿಸರದ ಪ್ರದೇಶವಾಗಿದೆ. ಈ ನದಿತಿರುವು ಯೋಜನೆಯಿಂದ ಇಲ್ಲಿನ ಜೀವ ವೈವಿಧ್ಯಭರಿತ ನದಿತೀರದ ಅರಣ್ಯಗಳು ಹಾಗೂ ಕೃಷಿ ಭೂಮಿ ವ್ಯಾಪಕವಾಗಿ ನಾಶವಾಗುತ್ತವೆ.

ನದಿಯ ಕೆಳಭಾಗದಲ್ಲಿ ನೀರಿನ ಹರಿವು ಕಡಿಮೆಯಾಗಿ ಕುಡಿಯುವ ಹಾಗೂ ಕೃಷಿನೀರಿನ ಕೊರತೆ ಉಂಟಾಗುತ್ತದೆ. ಮೀನು, ಏಡಿ, ಕಪ್ಪೆಯಂಥ ಅಸಂಖ್ಯ ಜಲಚರ ವಂಶಗಳು ಕಣ್ಮರೆಯಾಗುತ್ತವೆ. ಈಗಾಗಲೇ ಭೂಕುಸಿತದಿಂದ ಅಪಾಯಕ್ಕೊಳಗಾಗಿರುವ ಈ ಪ್ರ ದೇಶದ ಇಳಿಜಾರಾದ ಪ್ರದೇಶಗಳಲ್ಲಿ ಮತ್ತಷ್ಟು ಭೂಕುಸಿತಗಳು ಘಟಿಸಲಿವೆಯೆಂದೂ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇವೆಲ್ಲವುಗಳಿಂದಾಗಿ ನಮ್ಮಂಥ ರೈತರು, ಮೀನುಗಾರರು ಹಾಗೂ ವನವಾಸಿಗಳ ಜೀವನೋಪಾಯ ನಷ್ಟವಾಗಿ, ಬದುಕು ಕಷ್ಟವಾಗುತ್ತದೆ. ಹೀಗಾಗಿ, ಬೇಡ್ತಿ (ಗಂಗಾವಳಿ)ನದಿತಿರುವು ಯೋಜನೆಯನ್ನು ತಕ್ಷಣ ಕೈಬಿಡಬೇಕು. ಅಂತೆಯೇ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಸ್ತಾವವಾಗಿರುವ ಇನ್ನೊಂದು ಯೋಜನೆಯಾದ ಅಘನಾಶಿನಿ ನದಿತಿರುವು ಯೋಜನೆ ಕೂಡ ಅಗಾಧ ಪ್ರಮಾಣದಲ್ಲಿ ಕಾಡು ನದಿ ಪರಿಸರವನ್ನು ನಾಶಮಾಡುವುದರ ಜೊತೆಗೆ, ಸಾವಿರಾರು ರೈತರು, ವನವಾಸಿಗಳು, ಮೀನುಗಾರರ ಬದುಕನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ. ಹೀಗಾಗಿ, ಈ ಅಪಾಯಕಾರಿ ಯೋಜನೆಯನ್ನೂ ಕೈಬಿಡಬೇಕೆಂದು ಒತ್ತಾಯಿಸುತ್ತೇವೆ.

ಪತ್ರ ಚಳವಳಿಯಲ್ಲಿ ಪಾಲ್ಗೊಂಡ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಅಘನಾಶಿನಿ-ಬೇಡ್ತಿ ನದಿ ತಿರುವು ಜಿಲ್ಲೆಗೆ ಮಾರಕ ಯೋಜನೆಯಾಗಿದ್ದು, ಈಗಾಗಲೇ ವಿವಿಧ ಹೋರಾಟ ನಡೆಯುತ್ತಿದೆ. ಯೋಜನೆ ವಿರುದ್ಧ ಹೋರಾಡುವುದು ಚುನಾಯಿತರ ಸದಸ್ಯರ ಜವಾಬ್ದಾರಿಯಾಗಿದೆ. ಜಿಲ್ಲೆಯ ಜನರೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇನ್ನೊಮ್ಮೆ ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರ ಸರ್ಕಾರವನ್ನು ಭೇಟಿಯಾಗಿ ಯೋಜನೆ ಕೈಬಿಡುವಂತೆ ಆಗ್ರಹ ಮಾಡಲಾಗುತ್ತದೆ. ವಕೀಲರ ಜತೆ ಚರ್ಚೆ ನಡೆಸಿ, ಕಾನೂನು ಹೋರಾಟಕ್ಕೂ ಸಿದ್ಧರಾಗುತ್ತೇವೆ ಎಂದು ಎಚ್ಚರಿಸಿದರು.
ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ಮಾತನಾಡ, ಬೇಡ್ತಿ, ಅಘನಾಶಿನಿ ನದಿ ತಿರುವು ಯೋಜನೆ ವಿರುದ್ಧ ಈಗಾಗಲೇ ಸಾಕಷ್ಟು ಹೋರಾಟವನ್ನು ನಡೆಸಿದ್ದೇವೆ. ಆದರೂ ಸರ್ಕಾರ ಯೋಜನೆಯನ್ನು ನಿಲ್ಲಿಸುವ ಕೆಲಸ ಮಾಡಿಲ್ಲ. ಹಾಗಾಗಿ ಪತ್ರ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರ ಚಳವಳಿಯಲ್ಲಿ ಪ್ರಮುಖರಾದ ಶ್ರೀಪಾದ ರಾಯ್ಸದ್, ನರಸಿಂಹ ಸಾತೊಡ್ಡಿ, ಆರ್.ಎಸ್.ಹೆಗಡೆ ಭೈರುಂಬೆ, ಶಿವಾನಂದ ಕಳವೆ, ವಿಶ್ವನಾಥ ಹೆಗಡೆ ಶಿಗೇಹಳ್ಳಿ, ಆರ್.ಎಂ.ಹೆಗಡೆ ಬಾಳೇಸರ, ಸುರೇಶ ಹೆಗಡೆ ಹಕ್ಕಿಮನೆ, ರತ್ನಾಕರ ಬಾಡಲಕೊಪ್ಪ, ದೀಪಕ ಹೆಗಡೆ ದೊಡ್ಡೂರು, ಎಸ್.ಕೆ.ಭಾಗ್ವತ ಶಿರ್ಸಿಮಕ್ಕಿ, ಸದಾನಂದ ಭಟ್ಟ ನಿಡಗೋಡ, ರವಿ ಹೆಗಡೆ ಹಳದೋಟ, ಎಂ.ಕೆ.ಹೆಗಡೆ ಯಡಳ್ಳಿ, ಮಾಂತೇಶ ಹಾದಿಮನೆ, ಶ್ರೀಪಾದ ಹೆಗಡೆ ಸೇರಿದಂಗೆ ಸಾವಿರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.
ಶಿರಸಿ-ಸಿದ್ದಾಪುರ ಕ್ಷೇತ್ರದ ಜನತೆಯ ಪರವಾಗಿ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿ ನದಿ ತಿರುವು ಯೋಜನೆ ವಿರೊಧಿಸಿದ್ದೇನೆ. ಜನರ ಪ್ರತಿನಿಧಿಯಾಗಿ ಎಲ್ಲ ಹಂತದಲ್ಲಿಯೂ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ.
-ಭೀಮಣ್ಣ ನಾಯ್ಕ, ಶಾಸಕ
ನದಿ ಜೋಡಣೆ ಯೋಜನೆ ನಿಲ್ಲುವರೆಗೂ ಯಾವುದೇ ಹೋರಾಟಕ್ಕೂ ಸಿದ್ದರಿದ್ದೇವೆ. ಜಯ ಸಿಗುವ ವರೆಗೆ ಹೋರಾಟ ಮಾಡುತ್ತೇವೆ.
– ಗೋಪಾಕೃಷ್ಣ ವೈದ್ಯ, ಸಮಿತಿ ಉಪಾಧ್ಯಕ್ಷ ಹಾಗೂ ಟಿ.ಎಸ್.ಎಸ್ ಅಧ್ಯಕ್ಷ
ಜಿಲ್ಲೆಯಲ್ಲಿ ನದಿ ತಿರುವಿನ ಭೂತ 25 ವರ್ಷಗಳಿಂದ ಬೆನ್ನು ಹಿಡಿದಿದೆ. ಅದನ್ನು ಓಡಿಸಬೇಕಾಗಿದೆ.
– ಅನಂತ ಹೆಗಡೆ ಅಶೀಸರ, ಅಘನಾಶಿನಿ-ಬೇಡ್ತಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ
ಮೊಳಗಿದ ಘೋಷಣೆ:
ಪತ್ರ ಚಳವಳಿಯಲ್ಲಿ ಭಾಗವಹಿಸಿದ್ದ ನೂರಾರು ಸಾರ್ವಜನಿಕರು ನಮ್ಮ ನದಿ, ನಮ್ಮ ಹಕ್ಕು. ಬಿಡೆವವು ಬಿಡೆವು ಬೇಡ್ತಿ ಬಿಡೆವು. ಕೊಡೆವು ಕೊಡೆವು ಅಘನಾಶಿನಿ ಕೊಡೆವು. ಬೇಡ್ತಿಯ ಹರಿವೇ ನಮ್ಮ ಉಳಿವು. ಅಘನಾಶಿನಿ ಉಳಿವು ನಮ್ಮ ಬದುಕು ಎಂಬ ಘೋಷಣೆ ಕೂಗಿ ನದಿ ತಿರುವು ಯೋಜನೆಯನ್ನು ವಿರೋಧಿಸಿದರು.
