ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗರ ಜಾಗೃತಿ ಸಭೆ

ಕುಮಟಾ: ಜಿಲ್ಲಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗರ ಜಾಗೃತಿ ಸಭೆಯು ಬೆಂಗಳೂರಿನ ಶ್ರೀ ಆದಿಚುಂಚನಗಿರಿ ಸಭಾಭವನದಲ್ಲಿ ಜರುಗಿತು.

ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗ ಮಾರ್ಗದರ್ಶಕರು, ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಬೆಂಗಳೂರು ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಗೊಂಡಿತು.

ಶ್ರೀ ನಿರ್ಮಲಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಮಠವು ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗರನ್ನು ಮುನ್ನೆಲೆಗೆ ತರುವಲ್ಲಿ ಸ್ವಾಮೀಜಿ ಸದಾ ಪ್ರಯತ್ನಿಸುತ್ತಿದ್ದಾರೆ. ಶ್ರೀಮಠದ ಮೂಲಕ ಜಿಲ್ಲೆಯಲ್ಲಿ 3 ಒಕ್ಕಲಿಗ ಭವನವನ್ನು ನಿರ್ಮಾಣ ಮಾಡಿದ್ದಾರೆ. ಜಿಲ್ಲೆಯ ಒಕ್ಕಲಿಗರ ಭವನವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ಸರ್ಕಾರದ ಹಂತದಲ್ಲಿ ಪ್ರಯತ್ನ ಮಾಡಿ ಜಾಗವನ್ನು ಮಂಜೂರು ಮಾಡುವ ಕೆಲಸ ಮುಂದಿನ ಹಂತದಲ್ಲಿ ಮಾಡಬೇಕು ಎಂದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಿಂದ ಸೇರಿ ಕೋಲಾರದವರೆಗಿನ ಒಕ್ಕಲಿಗರನ್ನು ಒಗ್ಗೂಡಿಸುವ ಸಾಮರ್ಥ್ಯವಿರುವುದು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಮಾತ್ರ ಸಾಧ್ಯ. ಮುಂದಿನ ದಿನ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಸಭೆಗಳನ್ನು ಮಾಡುತ್ತೇನೆ. ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗ ಭವನವನ್ನು ಬೆಂಗಳೂರಿನಲ್ಲಿ ನಿರ್ಮಿಸಲು ಸ್ಥಳವನ್ನು ಕೇಳಿದ್ದೀರಿ, ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂಬ ಭರವಸೆ ನೀಡಿದರು.

ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಒಕ್ಕಲಿಗರು ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಿ. ಪೂಜ್ಯರೊಂದಿಗೆ ಚರ್ಚಿಸಿ ಉತ್ತರ ಕನ್ನಡ ಜಿಲ್ಲೆಯ ಒಕ್ಕಲಿಗರ ಭವನ ಹಾಗೂ ಕೆಲವೊಂದು ಉದ್ದೇಶಗಳನ್ನು ಮಾಡಬೇಕೆಂಬುದು ನನ್ನ ಮನಸ್ಸಲ್ಲಿದೆ. ಮುಂದಿನ ದಿನ ಅದನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದರು.

ಕುಮಟಾದ ಹಾಲಕ್ಕಿ ಒಕ್ಕಲಿಗ ತಂಡದವರ ಸುಗ್ಗಿ ಕುಣಿತ ಪ್ರೇಕ್ಷಕರ ಗಮನಸೆಳೆಯಿತು. ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀನಿಧಿ ಗೌಡ ಹಾಗೂ ಮಧುರ ಪಡುಗಾರ ಭರತನಾಟ್ಯ ಪ್ರದರ್ಶನ ಕಲಾಸಕ್ತರನ್ನು ರಂಜಿಸಿತು.