ಕಾಂಗ್ರೆಸ್ ಸಾವಿರ ದಿನಗಳ ಸಾಧನೆ ಅಲ್ಲ, ಸಾವಿರ ವಿವಾದಗಳ ದಾಖಲೆ – ಕಾಗೇರಿ ಟೀಕೆ

ಶಿರಸಿ-

ರಾಜ್ಯ ಕಾಂಗ್ರೆಸ್ ಸರ್ಕಾರದ ಸಾವಿರ ದಿನಗಳಲ್ಲ. ಇದು ನಿರರ್ಥಕ ದಿನ, ಸಾವಿರ ಸುಳ್ಳಿ‌ನ ದಿ‌ನ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿ‌ಕಾರಿದರು.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಇದು ಸಾವಿರ ದಿನಗಳ ಸಾರ್ಥಕ ಸಂಭ್ರಮವಲ್ಲ, ಬದಲಾಗಿ ಸಾವಿರ ಸುಳ್ಳು, ಸಾವಿರ ವಿವಾದ ಮತ್ತು ಸಾವಿರ ಅಪರಾಧಗಳ ಕಳಂಕಿತ ದಿನಗಳು ಎಂದು ಗುಡುಗಿದರು. ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದೆ. ಕೇವಲ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಮಟ್ಟದಲ್ಲಿ ಮಾತ್ರವಲ್ಲದೆ, ಸಚಿವರು, ಶಾಸಕರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳವರೆಗೂ ಭ್ರಷ್ಟಾಚಾರದ ಬೇರುಗಳು ಆಳವಾಗಿ ಇಳಿದಿವೆ. ಇಡೀ ವ್ಯವಸ್ಥೆಯೇ ಭ್ರಷ್ಟಮಯವಾಗಿದೆ ಎಂದರು. ದೇಶದ ಮುಂದೆ ಕರ್ನಾಟಕ ತಲೆ ತಗ್ಗಿಸುವಂತೆ ಈ ಕಾಂಗ್ರೆಸ್ ಸರ್ಕಾರ ಮಾಡಿದೆ. ಜನರ ವಿಶ್ವಾಸ ಗಳಿಸುವಲ್ಲಿ ಸೋತಿರುವ ಸರ್ಕಾರ, ಕೇವಲ ಭ್ರಷ್ಟ ಹಾದಿಯಲ್ಲಿ ಅಧಿಕಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಸಾವಿರ ದಿನಗಳ ಸಾಧನೆಯ ಹೆಸರಿನಲ್ಲಿ ಸರ್ಕಾರ ಜನರಿಗೆ ಮೋಸ ಮಾಡುತ್ತಿದೆ. ಅಭಿವೃದ್ಧಿಗಿಂತ ಹೆಚ್ಚಾಗಿ ವಿವಾದಗಳೇ ಈ ಸರ್ಕಾರದ ದೊಡ್ಡ ಸಾಧನೆ ಎಂದು ಅವರು ವ್ಯಂಗ್ಯವಾಡಿದ ಕಾಗೇರಿ, ಅಪರಾಧಿಗಳ‌ ಮನಸ್ಥಿತಿ ಪುಷ್ಟಿ ನೀಡುತ್ತಿದೆ. ಅಪರಾಧ ಚಟುವಟಿಕೆ, ಎಲ್ಲ ಇಲಾಖೆ ಎಲ್ಲವೂ ಭ್ರಷ್ಟಾಚಾರವಾಗಿದೆ. ಭ್ರಷ್ಟಾಚಾರದಲ್ಲೂ ಎಲ್ಲ ದಾಖಲೆ‌ ಮೀರಿಸಿದ್ದು ಸಾವಿರ ದಿನಗಳ‌ ಸಾಧನೆ ಎಂದರು.

ಈ ವೇಳೆ‌ ಮಾಜಿ ಶಾಸಕ ಸುನೀಲ ಹೆಗಡೆ, ವಕ್ತಾರ ಸದಾನಂದ ಭಟ್ಟ, ವಿವಿಧ ಮಂಡಲಗಳ ಅಧ್ಯಕ್ಷರಾದ ಆನಂದ ಸಾಲೇರ, ರಮೇಶ ನಾಯಕ, ಉಷಾ ಹೆಗಡೆ, ಶ್ರೀಕಾಂತ ಬಳ್ಳಾರಿ, ರವಿ ಶೆಟ್ಟಿ, ಪ್ರೇಮಕುಮಾರ, ಆನಂದ ಸಾಲೇರ ಇತರರು ಇದ್ದರು.