ಶಿರಸಿ:
ಮಹಾ ಶಿವರಾತ್ರಿ ಪ್ರಯುಕ್ತ ಶಾಲ್ಮಲಾ ನದಿಯೊಳಗಿನ ಪವಿತ್ರ ಸ್ಥಳವಾದ ಸಹಸ್ರಲಿಂಗ ಕ್ಷೇತ್ರದಲ್ಲಿ ನದಿಗಳ ಸಂರಕ್ಷಣೆಯ ಸಂಕಲ್ಪದೊಂದಿಗೆ ವಿಶೇಷ ಗಂಗಾರತಿ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.

ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿಗಳು ತಮ್ಮ ಶಿಷ್ಯರೊಂದಿಗೆ ಸೇರಿ ಗಂಗಾರತಿ ನೆರವೇರಿಸಿ ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹ ಹಾಗೂ ಪುಳಕದ ಭಾವ ಮೂಡಿಸಿದರು. ಬಳಿಕ ಆಶೀರ್ವಚನ ನುಡಿದ ಅವರು, ನದಿಗಳು ಉಳಿದರೆ ನಾಡು ಉಳಿಯುತ್ತದೆ; ನದಿಗಳು ಅಳಿದರೆ ನಾಡು ಅಳಿದು ಹೋಗುತ್ತದೆ. ಗಂಗಾವಳಿ, ಅಘನಾಶಿನಿ, ಶಾಲ್ಮಲಾ ಸೇರಿದಂತೆ ಪ್ರತಿಯೊಂದು ನದಿಯೂ ಪವಿತ್ರ ಗಂಗೆ ಸಮಾನ. ಗಂಗಾ ನದಿಗೆ ಅಪಾಯವಾದರೆ ಇಡೀ ಉತ್ತರ ಭಾರತ ಎದ್ದು ನಿಲ್ಲುತ್ತದೆ. ಅದೇ ರೀತಿ ನಮ್ಮ ನದಿಗಳಿಗೆ ಅಪಾಯವಿದೆ. ನಾವೂ ಗಟ್ಟಿಯಾಗಿ ನಿಲ್ಲಬೇಕು ಎಂದು ಹೇಳಿದರು.

ನದಿಗಳಲ್ಲಿ ನೀರಿನ ಹರಿವು ನಿಂತರೆ ಕೃಷಿ, ವನ್ಯಜೀವಿ ಹಾಗೂ ಅಂತರ್ಜಲದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಘಟ್ಟದ ಕೆಳಭಾಗದ ಜನಜೀವನವೂ ಈ ನದಿಗಳ ಮೇಲೆ ಅವಲಂಬಿತವಾಗಿದೆ. ನದಿ ಜೋಡಣೆ ಯೋಜನೆಗಳನ್ನು ವಿರೋಧಿಸಿಸಬೇಕು. ನದಿಗಳನ್ನು ಉಳಿಸಲು ಭಕ್ತಿ ಶಕ್ತಿಯಾಗಬೇಕು ಎಂದು ಅವರು ಕರೆ ನೀಡಿದರು. ಗಂಗಾಷ್ಟಮಿ ಹಾಗೂ ಶಿವರಾತ್ರಿ ದಿನಗಳಲ್ಲಿ ನದಿಗಳ ತೀರದಲ್ಲಿ ಪ್ರಾರ್ಥನೆ, ಆರತಿ ನಡೆಸುವಂತೆ ಸೂಚಿಸಿದ ಶ್ರೀಗಳು, ಯುಗಾದಿಯಿಂದ ಶ್ರೀರಾಮ ನವಮಿವರೆಗೆ ಮನೆಮನೆಗಳಲ್ಲಿ ಭಜನೆ ಮಾಡುವ ಮೂಲಕ ನದಿ ಜೋಡಣೆ ವಿರೋಧಿಸುವಂತಾಗಬೇಕು. ಭಕ್ತಿ ಶಕ್ತಿಯಾಗಬೇಕು. ಪಾದಯಾತ್ರೆ, ಜಾಥಾ ಮಾಡುವ ಸಂದರ್ಭ ಬಂದರೆ ಜನ ಕಿಕ್ಕಿರಿದು ಸೇರಬೇಕು ಎಂದೂ ಶ್ರೀಗಳು ಹೇಳಿದರು.

ಕಾರ್ಯಕ್ರಮದಲ್ಲಿ ಮಠದ ಕಿರಿಯ ಸ್ವಾಮೀಜಿ ಶ್ರೀ ಆನಂದಬೋಧೇಂದ್ರ ಸರಸ್ವತಿ ಮಹಾಸ್ವಾಮೀಜಿ, ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪ್ರಮುಖರು, ಮಠದ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಸುರೇಶ ಹಕ್ಕಿಮನೆ, ಅನಂತ ಭಟ್ಟ, ರತ್ನಾಕರ ಬಾಡಲಕೊಪ್ಪ ಇತರರು ಇದ್ದರು. ಭಕ್ತರು ದೀಪಾರತಿ ಬೆಳಗಿಸಿ ಪವಿತ್ರ ನದಿಗಳ ಉಳಿವಿಗೆ ಸಂಕಲ್ಪ ಕೈಗೊಂಡರು.




