
ಹೊನ್ನಾವರ: ತಾಲೂಕಿನ ಇತಿಹಾಸ ಪ್ರಸಿದ್ದ ಶಕ್ತಿ ಕ್ಷೇತ್ರಗಳಲ್ಲೊಂದಾದ ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿ ವಿನಾಯಕ ದೇವಾಲಯದ ಮಹಾಸ್ಯಂದನ ರಥೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಸಂಖ್ಯೆಯ ಭಕ್ತಸಾಗರದ ಸಮ್ಮುಖದಲ್ಲಿ ರವಿವಾರ ವಿಜ್ರಂಭಣೆಯಿಂದ ಸಂಪನ್ನವಾಯಿತು.

ಬಟ್ಟೇ ವಿನಾಯಕ,ಸಿದ್ದಿ ವಿನಾಯಕ ಇರುವ ಈ ಕ್ಷೇತ್ರ ಅಪಾರ ದೈವಿಕಶಕ್ತಿಯುಳ್ಳ ಸ್ಥಳವಾಗಿದೆ. ಬಟ್ಟೇ ವಿನಾಯಕನಿಗೆ ವಿಶೇಷವಾಗಿ ನೆನೆಗಡಲೆ ಅರ್ಪಿಸಲಾಗುತ್ತದೆ. ಭಕ್ತರು ತಮ್ಮ ಯಾವುದೇ ವಸ್ತು ಕಳುವಾದಾಗ ಅಥವಾ ಇನ್ನಾವುದೇ ಸಂಕಷ್ಠ ಎದುರಾದಾಗ ಬಟ್ಟೇ ವಿನಾಯಕನಲ್ಲಿ ಪ್ರಾರ್ಥಿಸಿಕೊಂಡಾಗ ಕಳುವಾದ ವಸ್ತು ಪ್ರಾಪ್ತವಾಗುತ್ತದೆ. ಸಂಕಷ್ಠಗಳು ದೂರವಾಗುತ್ತದೆ ಎನ್ನುವ ನಂಬಿಕೆ ಇದೆ. ಶ್ರೀ ಕ್ಷೇತ್ರದಿಂದ ಹಲವಾರು ಭಕ್ತರು ಒಳಿತು,ಅಚ್ಚರಿ ಕಂಡಿರುವ ನಿದರ್ಶನಗಳೂ ಇವೆ.ಆಗಮೋಕ್ತ ವಿಧಾನದಲ್ಲಿ ಸ್ಥಾಪಿಸಲ್ಪಟ್ಟ ಈ ದೇವಾಲಯದಲ್ಲಿ ಗಣ ಹವನ, ವಿಶೇಷ ಪೂಜೆ, ವಾರ್ಷಿಕ ರಥೋತ್ಸವಾದಿಗಳನ್ನು ವಿಧ್ವಕ್ತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ವರ್ಷಂಪ್ರತಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಾರೆ. ಇನ್ನು ರಥೋತ್ಸವ ಹಿನ್ನಲೆ ಕೌತುಕ ಬಂಧನ, ಬಲಿಪೂಜೆ, ಮಹಾಗಣಪತಿ ಪಲ್ಲಕ್ಕಿ ಉತ್ಸವ,ಸಂಪ್ರೋಕ್ಷಿಣ್ಯ ನಡೆಯಿತು.

ಮುಡೇಶ್ವರದ ಜಯರಾಮ ಅಡಿಗಳ ತಾಂತ್ರಿಕ ತನದಲ್ಲಿ ರಥೋತ್ಸಾವಾಂಗ ಧಾರ್ಮಿಕ ಕಾರ್ಯಕ್ರಮ ನಡೆದವು. ಭಕ್ತರು ಶ್ರೀ ಸನ್ನಿದಿಗೆ ಆಗಮಿಸಿ ವಿನಾಯಕನಿಗೆ ವಿವಿಧ ಸೇವೆ ಸಲ್ಲಿಸಿದರು,ರಥ ಕಾಣಿಕೆ ಮಾಡಿ,ತಾವು ತಂದ ತೆಂಗು,ಅಡಿಕೆ ಫಲಗಳನ್ನು ರಥಕ್ಕೆ ಕಟ್ಟಿ ಬಾಳೆಹಣ್ಣು ಎಸೆದು,ರಥ ಎಳೆದು ಸಂಭ್ರಮಿಸಿದರು. ರಥಾರೂಡನಾದ ಶ್ರೀ ಸಿದ್ದಿವಿನಾಯಕನ ದರ್ಶನ ಪಡೆದ ಭಕ್ತಗಣ ಪುನಿತವಾಯಿತು.ಜಾತ್ರೆ ಹಿನ್ನೆಲೆ ಆಟಿಕೆ ಅಂಗಡಿಗಳು,ಅಮ್ಯೂಸ್ ಮೆಂಟ್ ಪಾರ್ಕಗಳು ಚಿಣ್ಣರ ಚಿತ್ತ ಸೆಳೆದವು,ಸಿಹಿಖಾದ್ಯ ಅಂಗಡಿಗಳಿದ್ದವು.ರಾತ್ರಿ 9:30ಕ್ಕೆ ಸಾಲಿಗ್ರಾಮ ಮೇಳದವರಿಂದ ಕೊಳಗದ್ದೆ ರಥಬೀದಿಯಲ್ಲಿ ‘ಕಾರ್ತವೀರ್ಯ’-ಮಾಯಾಬಜಾರ್ ಜಾಂಬವತಿ’ ಯಕ್ಷಗಾನ ನಡೆಯಿತು.ದೇವರಿಗೆ ಸೇವೆ ಸಲ್ಲಿಸಲು ಭಕ್ತಾದಿಗಳಿಗೆ ದೇವಾಲಯದ ಆಡಳಿತ ಮಂಡಳಿ ಉತ್ತಮವಾಗಿ ವ್ಯವಸ್ಥೆ ಕಲ್ಪಿಸಿತ್ತು.
ಒಟ್ನಲ್ಲಿ ಶ್ರೀ ಸಿದ್ದಿವಿನಾಯಕನ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು,ಎಲ್ಲೆಡೆ ಜಾತ್ರಾ ಸಂಭ್ರಮ ನಡೆಯಿತು.
