ತಿರುಪತಿ ರೈಲು ಕುಮಟಾಗೆ ,ಶಾಸಕ ದಿನಕರ್ ಶೆಟ್ಟಿ ಪ್ರಯತ್ನಕ್ಕೆ ಯಶಸ್ಸು

ಕುಮಟಾ ಫೆ.09 : ಹೈದರಾಬಾದಿನ ಕಾಚಿಗುಡದಿಂದ ತಿರುಪತಿಯ ರೇಣಿಗುಂಟ ಮೂಲಕ ಮುರುಡೇಶ್ವರದವರೆಗೆ ಬರುತಿದ್ದ ವಾರಕ್ಕೆರಡು ದಿನದ ರೈಲು ಕುಮಟಾದ ನೂರಾರು ತಿಮ್ಮಪ್ಪನ ಭಕ್ತರಿಗೆ ಅನುಕೂಲ ಮಾಡಿಕೊಡಲು ಕುಮಟಾಗೆ ಬರ ಬೇಕು ಹಾಗೂ ಇದರಿಂದ ದಕ್ಷಿಣ ಭಾರತದ ಖ್ಯಾತ ಶಿವ ಕ್ಷೇತ್ರ ಗೋಕರ್ಣಕ್ಕೂ ತಿರುಪತಿಯ ಸಂಪರ್ಕ ಸಿಕ್ಕಂತಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಶಾಸಕ ದಿನಕರ್ ಶೆಟ್ಟಿಯವರು ರೈಲು ಆರಂಭವಾದ ದಿನದಿಂದಲೇ ಪ್ರಯತ್ನ ಆರಂಭಿಸಿದ್ದು ಅದಕ್ಕೆ ಯಶಸ್ಸು ಲಭಿಸಿದೆ.

ಕೊಂಕಣ ರೈಲ್ವೆಯ ಹಿರಿಯ ಅಧಿಕಾರಿಗಳೊಂದಿಗೆಹಲವು ಸುತ್ತಿನ ಮಾತುಕತೆ ನಡೆಸಿದ್ದ ಶಾಸಕ ದಿನಕರ್ ಶೆಟ್ಟಿಯವರು , ಸಂಸದ ಕಾಗೇರಿ ಹಾಗು ಸೋಮಣ್ಣ ಜೊತೆಗೂ ನೇರ ಸಂಪರ್ಕದಲ್ಲಿದ್ದರು. ಉತ್ತರ ಕನ್ನಡದಿಂದ ನಿತ್ಯ ನೂರಾರು ಜನ ತಿರುಪತಿಗೆ ಪ್ರಯಾಣ ಮಾಡುತಿದ್ದು ಅವರೆಲ್ಲರೂ ಮುರುಡೇಶ್ವರಕ್ಕೆ ಬಾಡಿಗೆ ವಾಹನ ಬಸ್ ಗಳಲ್ಲಿ ಬರ ಬೇಕಾದ ಸ್ತಿತಿ ಇದ್ದು ಅವರಿಗೆ ಅದರಲ್ಲೂ ವಯಸ್ಸಾದವರಿಗೆ ಇದು ಸಮಸ್ಯೆ ಆಗಿತ್ತು. ಹೀಗಾಗಿ ಅಂಕೋಲಾ ,ಶಿರಸಿ , ಸಿದ್ದಾಪುರ ಕಡೆಯ ಜನರಿಗೆ ಅನುಕೂಲವಾಗಲು ,ಕರಾವಳಿಯ ಕೇಂದ್ರ ಭಾಗವಾದ ಕುಮಟಾಕ್ಕೆ ಈ ರೈಲು ವಿಸ್ತರಣೆ ಆಗಲೇಬೇಕೆಂದು ಒತ್ತಡ ತಂದು ಕೊಂಕಣ ನಿಗಮದಿಂದ ಈ ಕುರಿತು ಪ್ರಸ್ತಾಪನೆಯನ್ನು ರೈಲು ಮಂಡಳಿ ದೆಹಲಿಗೆ ಕಳಿಸುವಲ್ಲಿ ಶಾಸಕ ಶೆಟ್ಟಿ ಯಶಸ್ವಿಯಾಗಿದ್ದರು. ದೆಹಲಿಗೆ ಪ್ರಸ್ತಾಪ ಕಳಿಸಿದ ನಂತರವೂ ದಿನಕರ್ ಶೆಟ್ಟಿ ಕೇಂದ್ರ ರೈಲು ಸಚಿವರ ಜತೆ ನಿರಂತರ ಸಂವಹನ ನಡೆಸಿ ಜತೆಗೆ ಸಂಸದ ಕಾಗೇರಿಯವರ ಮೂಲಕ ರೈಲ್ವೇ ರಾಜ್ಯ ಸಚಿವ ಸೋಮಣ್ನನವರ ಮೇಲೆ ಒತ್ತಡ ತಂದು ಕಾಚಿಗುಡ ತಿರುಪತಿ (ರೇಣಿಗುಂಟ) ಮುರುಡೇಶ್ವರ ರೈಲಿನ ಕುಮಟಾ ವಿಸ್ತರಣೆಗೆ ಕಾರಣವಾಗಿದ್ದಾರೆ.

ಈ ಪ್ರಕ್ರಿಯೆಯ ಉದ್ದಕ್ಕೂ ಉತ್ತರ ಕನ್ನಡ ರೈಲ್ವೇ ಸೇವಾ ಸಮಿತಿಯ ಸರ್ವರೂ ಮುಖ್ಯವಾಗಿ ರಾಜೀವ್ ಗಾಂವ್ಕರ್ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿದ್ದಲ್ಲದೇ , ಬೇಡಿಕೆ ಈಡೇರಲು ವಿಳಂಬವಾದಾಗ ಶಾಸಕ ದಿನಕರ್ ಶೆಟ್ಟಿಯವರ ಮೂಲಕ ಪ್ರತಿಭಟನೆಯ ಎಚ್ಚರಿಕೆಯನ್ನೂ ರವಾನಿಸಿದ್ದರು. ಈಗಾಗಲೇ ಶಾಸಕ ದಿನಕರ್ ಶೆಟ್ಟಿಯವರು ಈ ಹಿಂದೆ ಕೊಂಕಣ ರೈಲ್ವೇ ಸಲಹಾ ಸಮಿತಿಯ ಸದಸ್ಯರಾಗಿದ್ದಾಗ ನಡೆಸಿದ ವಿಶೇಷ ಪ್ರಯತ್ನದಿಂದ ಕುಮಟಾಗೆ ಎರಡನೇ ಪ್ಲಾಟ್ ಪಾರಂ ಕೂಡ ಮಂಜೂರಾಗಿ ನಿರ್ಮಾಣ ಪೂರ್ಣವಾಗುತ್ತಿದೆ. ಪ್ರತಿ ಬುಧವಾರ ಮತ್ತು ಶನಿವಾರ ಕುಮಟಾದಿಂದ ತಿರುಪತಿ ಕಡೆ ತೆರಳುವ ರೈಲು ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಿರುಪತಿಯಿಂದ ಕುಮಟಾ ಕಡೆ ಸಂಚರಿಸಲಿದೆ. ಮಾರ್ಗದ ಮಧ್ಯೆ ಹೊನ್ನಾವರದಲ್ಲೂ ನಿಲುಗಡೆ ಹೊಂದಲಿರುವ ಈ ರೈಲಿನ ವಿಸ್ತರಣೆಯಿಂದ ಕುಮಟಾ ನಿಲ್ದಾಣವು ಮೊದಲ ಬಾರಿ ಟರ್ಮಿನಲ್ ನಿಲ್ದಾಣವಾಗಿ ಮೇಲ್ದರ್ಜೆಗೆ ಏರಲಿದೆ. ಶಾಸಕ ದಿನಕರ್ ಶೆಟ್ಟಿಯವರ ಪ್ರಯತ್ನ ಹಾಗು ಸಂಸದ ಕಾಗೇರಿಯವರಿಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ಕಂಡು ಬಂದಿದ್ದು, ಜನರಲ್ಲಿ ಸಂತಸ ಮೂಡುವಂತೆ ಮಾಡಿದೆ..