ಹೊನ್ನಾವರ ಅ. 07: ಕಳೆದ 40ವರ್ಷಗಳಿಂದ ಉತ್ತರಕನ್ನಡ ಕರಾವಳಿಯ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಶ್ರೀದೇವಿ ಆಸ್ಪತ್ರೆ ಇತ್ತೀಚಿನ ವರ್ಷದಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರ ನಿಗದಿತ ಸೇವೆಯನ್ನೊಳಗೊಂಡು ಪ್ರಸಿದ್ಧವಾಗಿದೆ. ಸಂಸ್ಥೆಯ ಸೇವಾ ವಿಭಾಗದ ಅಂಗವಾಗಿ ಶ್ರೀದೇವಿ ಟ್ರಸ್ಟ್ ದಿನಾಂಕ 13ರಂದು ನರ್ಸಿಂಗ್ ಕಾಲೇಜು ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ಆರಂಭಿಸಲಿದೆ.

ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಚಂದ್ರಶೇಖರ ಶೆಟ್ಟಿ ಮತ್ತು ಪ್ರಸಿದ್ಧ ಹೃದಯರೋಗ ತಜ್ಞ ಡಾ. ದೇವಿಪ್ರಸಾದ ಶೆಟ್ಟಿ ಬೆಂಗಳೂರು ಇವರು ಸಹಪಾಠಿಗಳು. ವಿದ್ಯಾರ್ಥಿ ದೆಸೆಯಿಂದಲೇ ವೈದ್ಯರಾಗಿ ಸಮಾಜಸೇವೆಗೆ ಒಲವುಳ್ಳವರು. ಜೊತೆಯಲ್ಲಿ ಡಾ. ದೇವಿಪ್ರಸಾದ ಶೆಟ್ಟಿಯವರ ಸಹೋದರಿ ಡಾ. ಚಂದ್ರಶೇಖರ ಶೆಟ್ಟಿಯವರ ಪತ್ನಿ. ಡಾ. ದೇವಿಪ್ರಸಾದ ಶೆಟ್ಟಿಯವರು ಬೆಂಗಳೂರಿಗೆ ಹೋದರೆ ಡಾ. ಚಂದ್ರಶೇಖರ ಶೆಟ್ಟಿಯವರು ಪ್ರಸೂತಿ ತಜ್ಞರಾಗಿ ಮತ್ತು ಎಂಡೋಸ್ಕೋಪಿಕ್ ಮತ್ತು ಇನ್ಫರ್ಟಲಿಟಿ ತಜ್ಞರಾಗಿ ಹೊನ್ನಾವರಕ್ಕೆ ಬಂದು ಪ್ರಭಾತನಗರದ ಶಾಂತಿ ಆಸ್ಪತ್ರೆಯ ಕಟ್ಟಡದಲ್ಲಿ ಆಸ್ಪತ್ರೆ ಆರಂಭಿಸಿ ನಂತರ ಬಂದರ್ ರಸ್ತೆಯ ಹೊಸಕಟ್ಟಡಕ್ಕೆ ಬಂದರು.

ಅಂದಿನಿಂದ ನಿರಂತರವಾಗಿ 24 ತಾಸು ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಜೊತೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಲಯನ್ ಭವನ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಈಗ ಜಿಲ್ಲೆಯ ಯುವಕ-ಯುವತಿಯರಿಗೆ ಉದ್ಯೋಗ ಒದಗಿಸಿಕೊಡಲು ಮೂಲವಾಗಿ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜನ್ನು ಆರಂಭಿಸುತ್ತಿದ್ದಾರೆ. ಈ ವರ್ಷ ಪ್ಯಾರಾಮೆಡಿಕಲ್‌ಗೆ 80, ನರ್ಸಿಂಗ್‌ಗೆ 40 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.
125 ಹಾಸಿಗೆಗಳ ಶ್ರೀದೇವಿ ಆಸ್ಪತ್ರೆಯಲ್ಲಿ ಅವರ ಮಗ ಡಾ. ಭಾರ್ಗವ ಶೆಟ್ಟಿ, ಮಕ್ಕಳ ತಜ್ಞ ಡಾ. ಪ್ರಮೋದ ಫಾಯ್ದೆ, ಯಲುಬುಕೀಳು ತಜ್ಞ ಡಾ. ವಿನಾಯಕ ರಾಯ್ಕರ್ ಮೊದಲಾದ ವೈದ್ಯರ ಸೇವೆ ನಿರಂತರ ಲಭ್ಯವಿದ್ದು ಮಂಗಳೂರು ಕೆಎಂಸಿಯ ಖ್ಯಾತ ಹೃದಯ ತಜ್ಞ ಡಾ. ನರಸಿಂಹ ಪೈ, ನರರೋಗ ತಜ್ಞ ಡಾ. ಶಿವಾನಂದ ಪೈ ಸಹಿತ ನೆರೆ ಜಿಲ್ಲೆಯ 15ಕ್ಕೂ ಹೆಚ್ಚು ತಜ್ಞ ವೈದ್ಯರ ಸೇವೆ ನಿಗದಿತವಾಗಿ ಶ್ರೀದೇವಿಯಲ್ಲಿ ದೊರೆಯುತ್ತಿದೆ. ಸರ್ಕಾರದ ಎಲ್ಲ ಉಚಿತ ಯೋಜನೆಗಳು, ವಿಮಾ ಯೋಜನೆಗಳು ಇಲ್ಲಿ ಲಭ್ಯವಿದೆ. ತಮ್ಮ ಹೊಸ ಸಂಸ್ಥೆಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬೇಕೆಂದು ಡಾ. ಶೆಟ್ಟಿ ಕೋರಿದ್ದಾರೆ.
